ಪಾಂಡವಪುರ: ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ನೌಕರರ ಕೂಲಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಇಲಾಖೆಯ ದಿನಗೂಲಿ ನೌಕರರು ಅರಣ್ಯ ಇಲಾಖೆ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜು ಅವರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಕಚೇರಿಯ ಎದುರು ಧರಣಿ ಆರಂಭಿಸಿದ ನೌಕರರು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಪುಟ್ಟಸ್ವಾಮಿ ಎಂಬುವರು ವಲಯ ಅರಣ್ಯಾಧಿಕಾರಿಯಾಗಿ ಬಂದ ಬಳಿಕ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ದಿನಗೂಲಿ, ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿ ಮಾಡಿರುವ ದರಪಟ್ಟಿಯoತೆ ಸಂಬಳ ನೀಡದೆ ತಾರತಮ್ಯ ಮಾಡುತ್ತಿದ್ದಾರೆ. ಸರ್ಕಾರ ಎಲ್ಲ ನೌಕರರಿಗೂ ಒಂದೇ ದರ ನಿಗದಿ ಮಾಡಿ ಸಂಬಳ ನೀಡಬೇಕು ಎಂದು ಸೂಚಿಸಿದ್ದರೂ ನೌಕರರಿಗೆ ಒಂದೊಂದು ರೀತಿಯಲ್ಲಿ ಸಂಬಳ ನೀಡುತ್ತಿದ್ದಾರೆ ಎಂದು ದೂರಿದರು.
ವಲಯಾಧಿಕಾರಿ ಸರ್ಕಾರ ನಿಗದಿ ಮಾಡಿರುವ ಅನುದಾನ ಪ್ರಕಾರ ಇಲಾಖೆಯ ದರಪಟ್ಟಿ ನೀಡಬೇಕು. ನೌಕರರ ಬಾಕಿ ಸಂಬಳ ತಕ್ಷಣವೇ ಜಾರಿಗೊಳಿಸಬೇಕು. ತಪ್ಪಿದರೆ ಅನಿರ್ಧಿಷ್ಟ ಅವಧಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧ್ಯಕ್ಷ ತೊಳಿಸಿಕುಮಾರ್, ನೌಕರರಾದ ರಾಘು, ಮಂಜು, ಮಹೇಶ್, ಪ್ರಕಾಶ್, ಸ್ವಾಮೀಗೌಡ, ಚಂದ್ರಹಾಸ, ನಾಗರಾಜು, ಕುಮಾರ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
.