ಮಡಿಕೇರಿ : ಕಾಡಾನೆ ದಾಳಿಯಿಂದ ಕೃಷಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಕೊಡ್ಲಿಪೇಟೆಯ ಶಾಂತಪುರ ಗ್ರಾಮದ ಹೇವಾವತಿ ಹಿನ್ನೀರಿನ ಬಳಿ ನಡೆದಿದೆ.
ಸ್ಥಳೀಯ ಕಾರ್ಮಿಕ ಕುಮಾರ (40) ಮೃತಪಟ್ಟವರು. ಭಾನುವಾರ ಬೆಳಿಗ್ಗೆ ಭತ್ತದ ಪೈರು ನಾಟಿ ಮಾಡಲು ಕುಮಾರ ಹಾಗೂ ದೊಡ್ಡಯ್ಯ ಎಂಬವರು ಜಮೀನಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೊಳೆ ಸಮೀಪದ ಕರಿಕಡ್ಡಿ ಅರಣ್ಯ ಭಾಗದಿಂದ ಬಂದ ಕಾಡಾನೆ ಕುಮಾರ ಎಂಬವರ ಮೇಲೆ ದಾಳಿ ಮಾಡಿದೆ. ದೊಡ್ಡಯ್ಯ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಆದರೆ, ಕುಮಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್, ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.