Mysore
23
overcast clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ಚುನಾವಣೆ ದಿನಾಂಕ ಪ್ರಕಟಕ್ಕೂ ಮುನ್ನವೇ ಬರಲಿದೆ ಬ್ಯಾಲೆಟ್ ಯೂನಿಟ್

ಹೈದ್ರಾಬಾದ್‌ನಿಂದ ಪೊಲೀಸ್ ಭದ್ರತೆಯಲ್ಲಿ ಸರಬರಾಜು; ನೂತನ ಜಿಲ್ಲಾಧಿಕಾರಿ ಕಚೇರಿ ಸಮೀಪದ ವೇರ್‌ಹೌಸ್‌ನಲ್ಲಿ ಸಂಗ್ರಹ

ಮೈಸೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವಂತೆ, ಮತ್ತೊಂದೆಡೆ ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಮೈಸೂರಿಗೆ ಹೊಸ ಎಂ ೩ ಮಾದರಿಯ ಮತ ಯಂತ್ರಗಳು ಸರಬರಾಜಾಗಲಿದೆ.
ಮೈಸೂರು ಜಿಲ್ಲೆಗೆ ೫,೬೩೫ ಬ್ಯಾಲೆಟ್ ಯೂನಿಟ್, ೩,೯೫೮ ಕಂಟ್ರೋಲ್ ಯೂನಿಟ್‌ಗಳು ಇನ್ನೆರಡು ದಿನಗಳಲ್ಲಿ ಬರಲಿವೆ. ಕೇಂದ್ರ ಚುನಾವಣಾ ಆಯೋಗವು ಯಾವುದೇ ರಾಜ್ಯಕ್ಕೆ ಚುನಾವಣೆಗಳು ನಡೆದಾಗ ದೇಶದ ಯಾವುದೇ ರಾಜ್ಯಗಳಿಂದ ಮತ ಯಂತ್ರಗಳನ್ನು ಕಳುಹಿಸಿ ಕೊಡಲಾಗುತ್ತಿತ್ತು. ಆದರೆ, ಈಗ ಆಯಾ ಜಿಲ್ಲೆಗೆ ನೇರವಾಗಿ ಕಳುಹಿಸುವ ಕೆಲಸ ಮಾಡುತ್ತಿದೆ. ಹೈದರಾಬಾದ್‌ನಲ್ಲಿರುವ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ(ಇಸಿಐ)ನಿಂದ ಮತ ಯಂತ್ರಗಳನ್ನು ತಯಾರು ಮಾಡಲಾಗುತ್ತಿದೆ. ಅಲ್ಲಿಂದ ನೇರವಾಗಿ ಮೈಸೂರಿಗೆ ತರಲಾಗುತ್ತಿರುವುದು ವಿಶೇಷ.
ಮುಡಾ ಆಯುಕ್ತರ ತಂಡ ನೇತೃತ್ವ: ಹೈದ್ರಾಬಾದ್‌ನಿಂದ ಕಂಟೇನರ್‌ನಲ್ಲಿ ಮತಯಂತ್ರಗಳನ್ನು ತರಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ತಂಡ ಪಯಣ ಬೆಳೆಸಿದೆ. ಕಂಟೇನರ್ ಜತೆಗೆ ಆಯುಕ್ತರ ತಂಡ, ಜಿಪಿಎಸ್ ಹೊಂದಿರುವ ಎಸ್ಕಾರ್ಟ್‌ನೊಂದಿಗೆ ಹತ್ತು ಮಂದಿ ಪೊಲೀಸರು ಭದ್ರತೆಯ ಹೊಣೆ ಹೊತ್ತಿದ್ದಾರೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಭಾನುವಾರದ ಹೊತ್ತಿಗೆ ಕಂಟೇನರ್ ಬರುತ್ತಿದ್ದಂತೆ ಪರಿಶೀಲಿಸಿ ಇವಿಎಂ ವೇರ್‌ಹೌಸ್‌ನಲ್ಲಿ ಇಡಲಾಗುತ್ತದೆ ಎಂದು ಹೇಳಲಾಗಿದೆ.
ಹೊಸ ಮಷಿನ್: ಈ ಬಾರಿ ಹೊಸ ಎಂ ೩ ಹೆಸರಿನ ಮಾದರಿ ಮತ ಯಂತ್ರಗಳು ಚುನಾವಣೆಯಲ್ಲಿ ಬಳಕೆಯಾಗಲಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಹೈದ್ರಾಬಾದ್‌ನಲ್ಲಿರುವ ಇಸಿಐ ಕಂಪೆನಿಯವರು ತಯಾರು ಮಾಡಿದ್ದಾರೆ. ಈ ಯಂತ್ರದ ವಿಶೇಷತೆ, ಬ್ಯಾಲೆಟ್, ವಿವಿ ಬ್ಯಾಲೆಟ್ ಕುರಿತು ನಿಖರತೆ ಇರುತ್ತದೆ. ಚುನಾವಣೆ ಹೊತ್ತಿಗೆ ರಾಜಕೀಯ ಪಕ್ಷಗಳ ಸಭೆ ಕರೆದು ಇದರ ಬಗ್ಗೆ ಡೆಮೋ ನೀಡಲಾಗುತ್ತದೆ. ಅಲ್ಲಿಯವರೆಗೂ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!