Mysore
26
overcast clouds

Social Media

ಗುರುವಾರ, 16 ಜನವರಿ 2025
Light
Dark

ಕಳಪೆ ಗುಣಮಟ್ಟದ ಕಾಮಗಾರಿ ಎಂದು ದೂರುದಾರನಿಂದಲೇ ಜೆಸಿಬಿಯಿಂದ ಕಾಮಗಾರಿಯ ನಾಶ

ಹನೂರು: ತಾಲ್ಲೂಕಿನ ಬಂಡಳ್ಳಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ 30 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಚರಂಡಿ ಕಾಮಗಾರಿ ಯನ್ನು ಕಳಪೆ ಗುಣಮಟ್ಟ ದೆಂದು ದೂರು ನೀಡಿದ ದೂರುದಾರನೇ ಅಭಿವೃದ್ಧಿ ಕಾಮಗಾರಿಯನ್ನು ಜೆಸಿಬಿಯಿಂದ ಹೊಡೆದುಹಾಕಿ ನಾಶಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಂಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿಎಸ್ ಮಲ್ಲೇಶ ಎಂಬ ವ್ಯಕ್ತಿಯೇ ಈ ಕೃತ್ಯ ಎಸಗಿರುವ ದೂರುದಾರರು.

ಗ್ರಾಮ ಪಂಚಾಯತಿ ಕಚೇರಿ ಪಕ್ಕದ ಬಸವನಗುಡಿ ರಸ್ತೆಯು ನರೇಗಾ ಯೋಜನೆಯಲ್ಲಿ 2021-22 ನೇ ಸಾಲಿನ 30 ಲಕ್ಷ ರೂ ವೆಚ್ಚದಲ್ಲಿ ಕೈಗೊಂಡಿರುವ ಸಿ.ಸಿ.ರಸ್ತೆ ಕಾಮಗಾರಿಯು ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತಿ ಸಿಇಒ ರವರಿಗೆ ದೂರು ಸಲ್ಲಿಸಿದ ಮೇರೆಗೆ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಿವಾಸ ರವರು ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಈ ಬಗ್ಗೆ ದೂರುದಾರ ಹಾಗೂ ಮತ್ತವರ ಬೆಂಬಲಿಗರನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಶ್ನಿಸಿದಾಗ,ಕಳಪೆ ಕಾಮಗಾರಿಯನ್ನು ನಿಮಗೆ ತೋರಿಸುವ ಉದ್ದೇಶದಿಂದ ಇದನ್ನು ನಾವೇ ನಾಶ ಮಾಡಿದ್ದೇವೆ ಎಂದು ಒಪ್ಪಿಕೊಂಡ ದೂರುದಾರ ಮಲ್ಲೇಶ್, ಬೇಕಿದ್ದರೆ ನಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಂದು ಅಧಿಕಾರಿಗಳಿಗೆ ಸಮಜಾಯಿಸಿ ಉತ್ತರ ನೀಡಿದರು.

ಕಾಮಗಾರಿ ಪರಿಶೀಲನೆ ಮಾಡಿ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸರವರು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನರೇಗಾ ಯೋಜನೆಯ ಕಾಮಗಾರಿಯ ಸ್ಥಳ ಪರಿಶೀಲನೆ ಮಾಡಲಾಗಿದೆ. ಕಳಪೆ ಕಾಮಗಾರಿ ಆರೋಪದ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ.ಆದರೆ ದೂರುದಾರರೇ ಅಭಿವೃದ್ಧಿ ಕೆಲಸವನ್ನು ಜೆಸಿಬಿ ಯಿಂದ ಹಾಳು ಮಾಡಿರುವುದು ಸಾರ್ವಜನಿಕ ಆಸ್ತಿ ನಷ್ಟವಾಗಿದೆ.

ಈ ಬಗ್ಗೆ ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ ಆರೋಪದ ಮೇಲೆ ಅ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು. ಕಾಮಗಾರಿ ಪರಿಶೀಲನೆ ವೇಳೆ ಬಂಡಳ್ಳಿ ಗ್ರಾಮಸ್ಥರು ಒಬ್ಬರಿಗೊಬ್ಬರು ಮಾತಿನ ಚಕಮಕಿ ಶುರುವಾಗಿ ಗಲಭೆ ವಾತಾವರಣ ಸೃಷ್ಟಿಯಾಗುವ ಸಮಯಕ್ಕೆ ಹನೂರು ಪೊಲೀಸರು ಆಗಮಿಸಿ ವಾತಾವರಣವನ್ನು ತಿಳಿಗೊಳಿಸಿದರು.

ಈ ಸಂದರ್ಭದಲ್ಲಿ ಪಿಡಿಒ ರಾಜು ಲಮಾಣಿ, ನರೇಗಾ ಇಂಜಿನಿಯರ್ ಮಲ್ಲಿಕ್, ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ