Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪುರಸಭೆ ಸದಸ್ಯರಿಂದ ಕಸದ ವಾಹನ ಚಾಲನೆ

ಎಚ್.ಡಿ.ಕೋಟೆ: ಅಧಿಕಾರಿಗಳ ನಡೆ ಖಂಡಿಸಿ ವಾಹನ ಚಾಲಕರು ಗೈರು

ಮಂಜು ಕೋಟೆ
ಎಚ್.ಡಿ.ಕೋಟೆ: ಮನೆ ಮನೆ ಕಸಗಳನ್ನು ಸಂಗ್ರಹಿಸಲು ಇರುವ ವಾಹನಗಳನ್ನು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸ್ವತಃ ಓಡಿಸಿ ಕಸ ಸಂಗ್ರಹಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಪುರಸಭೆಯ ಕೆಲ ಅಧಿಕಾರಿಗಳು ಮತ್ತು ಟೆಂಡರ್ ಮೂಲಕ ವಾಹನ ಓಡಿಸುವ ಚಾಲಕರ ನಡುವೆ ಕೆಲಸಗಳ ವಿಚಾರವಾಗಿ ಜಗಳವಾಗಿ, ಆರು ಮಂದಿ ಚಾಲಕರು ವಾಹನದ ಕೀಗಳನ್ನು ೩ ದಿನಗಳ ಹಿಂದೆ ಹಿಂತಿರುಗಿಸಿದ್ದರು.
ಹೀಗಾಗಿ ಪಟ್ಟಣದ ಅನೇಕ ವಾರ್ಡುಗಳ ಮನೆಗಳಲ್ಲಿ ಕಸಗಳು ವಿಲೇವರಿಯಾಗದೆ ದುರ್ನಾತ ಬೀರುತ್ತಿತ್ತು. ಜನರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ವಾಹನ ಚಾಲಕರಿಗೆ ಕೆಲ ಜನಪ್ರತಿನಿಧಿಗಳು ಎಷ್ಟೇ ಮನವೊಲಿಸಿದರೂ ಪ್ರಯೋಜನವಾಗದೆ ಇದ್ದುದರಿಂದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಐಡಿಯಾ ವೆಂಕಟೇಶ್, ಪುರಸಭಾ ಸದಸ್ಯರಾದ ಮಿಲ್ ನಾಗರಾಜು, ಹೆಬ್ಬಾಳ ಲೋಕೇಶ್ ಅವರು ಕಸ ತುಂಬಿಕೊಂಡು ಹೋಗುವ ಮೂರು ವಾಹನಗಳ ಕೀಗಳನ್ನು ಪಡೆದು ಪೌರಕಾರ್ಮಿಕರನ್ನು ಕರೆದುಕೊಂಡು ತಾವೇ ವಾಹನ ಚಾಲನೆ ಮಾಡಿಕೊಂಡು ಅನೇಕ ವಾರ್ಡುಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಂಚರಿಸಿ ಮನೆಗಳಲ್ಲಿನ ಕಸವನ್ನು ಸಂಗ್ರಹಿಸಿದರು.


ಏನೇ ಸಮಸ್ಯೆಗಳು ಬಂದರೂ ವಾಹನ ಚಾಲಕರು ನಮ್ಮ ಗಮನಕ್ಕೆ ತಿಳಿಸಬೇಕು. ಏಕಾಏಕಿ ಇಂತಹ ಕ್ರಮ ಕೈಗೊಂಡರೆ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಹೊಸ ಟೆಂಡರ್‌ದಾರರಿಗೆ ಈ ಕೆಲಸ ನಿರ್ವಹಿಸಲು ಜವಾಬ್ದಾರಿ ನೀಡಲಾಗುವುದು. ಜನ ಸೇವಕರಾಗಿ ಕೆಲಸ ಮಾಡುವುದೇ ನಮ್ಮ ಕರ್ತವ್ಯವಾಗಿದೆ
-ಐಡಿಯಾ ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷ

ಮನೆ ಮನೆ ಕಸಗಳ ಸಂಗ್ರಹಿಸುವ ವಾಹನಗಳ ಓಡಿಸುವ ಚಾಲಕರಿಗೆ ಕೆಲ ಅಧಿಕಾರಿಗಳು ಬಾಯಿಗೆ ಬಂದಂತೆ ಬೈಯುತ್ತಾರೆ. ಇದರಿಂದ ಯಾರು ತಾನೆ ಕೆಲಸ ಮಾಡಲು ಸಾಧ್ಯ? ಪೌರಕಾರ್ಮಿಕರು ಮನುಷ್ಯರಲ್ಲವೇ?
-ಶ್ರೀರಂಗ, ಪೌರಕಾರ್ಮಿಕರ ಸಂಘದ ಅಧ್ಯಕ್ಷ.


ಅಧಿಕಾರಿಗಳು ಮತ್ತು ವಾಹನ ಚಾಲಕರು ನಡುವೆ ಏನೇ ಸಮಸ್ಯೆಗಳಿದ್ದರೂ ಗೊಂದಲಗಳಿದ್ದರೂ ಬಗೆಹರಿಸುತ್ತೇವೆ. ಅಧಿಕಾರಿಗಳು ಬಾಯಿಗೆ ಬಂದಂತೆ ಯಾರನ್ನೂ ನಿಂದಿಸಬಾರದು. ವಾಹನ ಚಾಲಕರು ನಮಗೆ ಮತ್ತು ಅಧ್ಯಕ್ಷರ ಗಮನಕ್ಕೆ ತಿಳಿಸದೆ ಗೈರುಹಾಜರಾಗಿರುವುದು ಸರಿಯಲ್ಲ.
-ಸುರೇಶ್, ಮುಖ್ಯಾಧಿಕಾರಿ, ಪುರಸಭೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ