Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ದೊಡ್ಡಿಂದುವಾಡಿಯಿಂದ ಹನೂರಿಗೆ ಪಾದಯಾತ್ರೆ ನಡೆಸಿದ ಕಾಂಗ್ರೆಸ್‌

ಹನೂರು: ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವ ದಿಸೆಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ತರವಾಗಿದೆ. ಮಹಾತ್ಮ ಗಾಂಧಿ, ನೆಹರೂ, ಲಾಲ್ ಬಹುದ್ದೂರ್ ಶಾಸ್ತ್ರಿ ಸೇರಿದಂತೆ ಅನೇಕ ಮಹನೀಯರು ಕಾಂಗ್ರೆಸ್ ಪಕ್ಷದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ ಎಂದು ಮಾಜಿ ಸಚಿವ  ಚಾ. ನಗರ ಜಿಲ್ಲಾ ಉಸ್ತುವಾರಿ ಚೆಲುವರಾಯಸ್ವಾಮಿ ತಿಳಿಸಿದರು.

ಭಾರತ ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ದೊಡ್ಡಿಂದುವಾಡಿ ಗ್ರಾಮದಿಂದ ಹನೂರಿನವರೆಗೆ ಕೈಗೊಳ್ಳಲಾಗಿದ್ದ ಅಮೃತ ನಡಿಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ದೊಡ್ಡಿಂದುವಾಡಿ ಗ್ರಾಮದಲ್ಲಿ ಚಾಲನೆ ನೀಡಿ ಬಳಿಕ ಮಾತನಾಡಿದರು.


ಕಾಂಗ್ರೆಸ್ ಸ್ವಾತಂತ್ರ್ಯದ ಬಳಿಕವೂ ಕೂಡ ದೇಶದ ಜನತೆಯ ಒಳಿತಿಗೆ ಶ್ರಮಿಸಿದೆ. ಬಿಜೆಪಿ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ದೇಶದ ಜನತೆಯನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಬಡವರ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳನ್ನು ಕೈಗೊಂಡಿರುವ ಶಾಸಕ ಆರ್. ನರೇಂದ್ರ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಚಾ. ನಗರ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಕಾಂಗ್ರೆಸ್ ಹುಟ್ಟಿದ್ದೆ ಭಾರತ ದೇಶದ ಸ್ವಾತಂತ್ರ್ಯ ತಂದುಕೊಡಲು. ಕಾಂಗ್ರೆಸ್ ಪಕ್ಷದ ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಬಿಜೆಪಿ ಸರ್ಕಾರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿ ಜಾತಿ ಕೋಮು ಗಲಭೆ ಬಣ್ಣಕಟ್ಟಿ ಅಶಾಂತಿಯನ್ನು ಉಂಟು ಮಾಡುತ್ತಿದೆ. ಇತ್ತೀಚಿಗೆ ಗಣೇಶ ಉತ್ಸವದಲ್ಲಿ ಸಾರ್ವರ್ಕರ್ ಫೋಟೋವನ್ನು ಹಾಕುತ್ತೇವೆ ಎಂದು ಹೊಸ ತಗಾದೆ ತೆಗೆದಿದ್ದಾರೆ. ಸಾರ್ವರ್ಕರ್ ಯಾರು ಅವರ ಕೊಡುಗೆ ಏನು. ಭಗತ್ ಸಿಂಗ್ ಅಂತಹ ಮೇರು ಸ್ವತಂತ್ರ ಹೋರಾಟಗಾರರು ಇವರಿಗೆ ನೆನಪಿಗೆ ಬರುವುದಿಲ್ಲವೆ. ಸಿದ್ದರಾಮಯ್ಯ ಅವರು ಮಡಿಕೇರಿಗೆ ಬಂದು ಮಡಿಕೇರಿ ಚಲೋ ಕಾರ್ಯಕ್ರಮ ಕೈಗೊಂಡರೆ ಹೆಣಗಳು ಬೀಳುತ್ತವೆ ಎಂದು ಹೇಳಿರುವ ಜಗ್ಗೇಶ್ ಒಬ್ಬ ಮುಟ್ಟಾಳ. ಜಗ್ಗೇಶ್ ಅವರ ಅರ್ಥದಲ್ಲಿ ಅಮಾಯಕರ ಹೆಣ ಬೀಳಿಸುವ ಉದ್ದೇಶ ಇದಾಗಿದೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರಿಗೆ ಅನುದಾನವನ್ನು ನೀಡುವಲ್ಲಿ ತಾರತಮ್ಯವನ್ನು ತೋರಿದೆ. ಬಿಜೆಪಿಗೆ ದಲಿತರು ಶೋಷಿತರು ಹಿಂದುಳಿದ ವರ್ಗದವರು ಅಲ್ಪಸಂಖ್ಯಾತರ ಮೇಲೆ ಕಾಳಜಿ ಇಲ್ಲ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಈ ಸಮುದಾಯಗಳಿಗೆ ನೀಡಿದ್ದರು ಎಂದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷದವರು ಇಂದಿನ ಯುವಪೀಳಿಗೆಗೆ ದೇಶಪ್ರೇಮವನ್ನು ಉದ್ದೀಪನಗೊಳಿಸುವ ನಿಟ್ಟಿನಲ್ಲಿ ಅಮೃತ ನಡಿಗೆ ಪಾದಯಾತ್ರೆಯನ್ನು ಕೈಗೊಂಡರು ಶ್ಲಾಘನೀಯವಾದದ್ದು, ಸಾರ್ವರ್ಕರ್ ಲಂಡನ್ ಜೈಲಿನಲ್ಲಿ ತನ್ನನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಕಳಿಸಬೇಡಿ ಎಂದಿದ್ದರು.6 ಬಾರಿ ಬ್ರಿಟಿಷರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದಾರೆ. ಇಂಥವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಜೆಪಿ ಬಿಂಬಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಮುಸ್ಲಿಂ ಲೀಗ್ ತೀವ್ರವಾದಿಗಳ ಜೊತೆ ಗುರುತಿಸಿಕೊಂಡಿದ್ದವರು ಸಾರ್ವರ್ಕರ್. ಪ್ರಧಾನಿ ನರೇಂದ್ರ ಮೋದಿ ಬಡವರ ಕಲ್ಯಾಣಕ್ಕೆ ಶ್ರಮಿಸದೆ. ಕಾರ್ಪೊರೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇವರು ಯಾವ ಸಾಧನೆಯನ್ನು ಮುಂದಿಟ್ಟುಕೊಂಡು ವೋಟ್ ಕೇಳಲು ಹೋಗುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಶಾಸಕರು ಆಯ್ಕೆಯಾಗುತ್ತಾರೆ ಎಂದರು.

ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿ, ಕಾಂಗ್ರೆಸ್ ಸ್ವತಂತ್ರ ನಂತರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರ ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಕಾಲರ, ಕುಷ್ಟರೋಗ, ಸಿಡುಬು ಮುಂತಾದ ಮಾರಕ ರೋಗಗಳನ್ನು ನಿರ್ಣಾಮ ಮಾಡಿದೆ. ಏಡ್ಸ್ ರೋಗದಿಂದ ದೇಶದ ಜನವೇ ಆತಂಕಕ್ಕೆ ಒಳಗಾಗಿದ್ದರು. ಆದರೆ ಇಂತಹ ರೋಗವನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ನಿಟ್ಟಿನಲ್ಲಿ ದಾಪುಗಾಲಿಟ್ಟಿತ್ತು. ಆದರೆ ಕೊರೋನಾ ಮಹಾಮಾರಿ ಬಂದಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಜಾಗಟೆ ಬಾರಿಸಿ, ದೀಪಹಚ್ಚಿ ಎಂದು ಕರೆ ನೀಡಿದ ಮೂರ್ಖ ಪ್ರಧಾನಿ ಎಂದು ಲೇವಡಿ ಮಾಡಿದ ಅವರು ಮಾಂಸದ ವಿಚಾರವಾಗಿ ಬಿಜೆಪಿ ಮಾತನಾಡುತ್ತಿದೆ. ದೇಹವೇ ಮೂಳೆ ಮಾಂಸಗಳ ತಡಿಕೆ. ಮಲಮೂತ್ರಗಳಿಂದ ತುಂಬಿದೆ. ಇದನ್ನೆಲ್ಲ ಹೊತ್ತುಕೊಂಡು ಜಳಕ ಮಾಡಿ ದೇವಾಲಯಕ್ಕೆ ಹೋದರೆ ಅಶುದ್ಧಿ, ಮೈಲಿಗೆ ಆಗುವುದಿಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.

ದೊಡ್ಡಿಂದುವಾಡಿ ಗ್ರಾಮದಿಂದ ಹನೂರಿನವರೆಗೆ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಪಾದಯಾತ್ರೆಗಳಿಗೆ ವಿವಿಧ ಗ್ರಾಮಗಳಲ್ಲಿ ನೀರು ಮಜ್ಜಿಗೆ ಉಪಹಾರದ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಾಸಕ ಆರ್, ನರೇಂದ್ರ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರುಗಳಾದ ಬಾಲರಾಜು, ಜಯಣ್ಣ, ಎ. ಆರ್.ಕೃಷ್ಣಮೂರ್ತಿ, ಚಾಮುಲ್ ನಿರ್ದೇಶಕರುಗಳಾದ ಶಾಹುಲ್ ಅಹಮದ್, ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ದೇವರಾಜು, ಈಶ್ವರ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಶಾಂತಿ,ಸುಧಾ, ನಾಗರಾಜು, ಉಪಾಧ್ಯಕ್ಷ ರಾಮಲಿಂಗಂ ಸದಸ್ಯರುಗಳಾದ ವಾಜಿದ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಸದಸ್ಯರಾದ ಸಂಪತ್, ಸುದೇಶ್, ಹರೀಶ್ ಕುಮಾರ್, ಟಿ ಸೋಮಶೇಖರ್, ಮುಖಂಡರುಗಳಾದ ಚೆಲುವ ಜವಾದ ಅಹಮದ್, ಮಾದೇಶ್, ಮಹೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ