Mysore
16
few clouds

Social Media

ಬುಧವಾರ, 07 ಜನವರಿ 2026
Light
Dark

ಜಿಲ್ಲೆಯ ಜನೌಷಧಿ ಕೇಂದ್ರಗಳಲ್ಲಿ ನೋ ಸ್ಟಾಕ್‌

ಮೈಸೂರು ನಗರ, ಜಿಲ್ಲೆಯ 61 ಕೇಂದ್ರಗಳಲ್ಲೂ ಔಷಧ ಕೊರತೆ
ಪ್ರಶಾಂತ್ ಎಸ್. ಮೈಸೂರು

ಮೈಸೂರು: ಜಿಲ್ಲೆಯ ಎಲ್ಲೆಡೆ ತೆರೆದಿರುವ ಜನೌಷಧಿ ಕೇಂದ್ರಗಳಲ್ಲಿ ಕುವೆಂಪುನಗರ ಹಾಗೂ ಜೆಎಸ್‌ಎಸ್ ಹಳೇ ಆಸ್ಪತ್ರೆ ಪಕ್ಕದಲ್ಲಿರುವ ಕೇಂದ್ರದಲ್ಲಿ ಮಾತ್ರ ಅಗತ್ಯ ಔಷಧಿಗಳು ಸಿಗುತ್ತಿದ್ದು, ಉಳಿದೆಡೆ ಕೊರತೆಯಿಂದಾಗಿ ಕೇವಲ ಹೆಸರಿಗಷ್ಟೇ ಕೇಂದ್ರವಿದೆ ಎಂಬಂತಾಗಿದೆ.
ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸುಲಭವಾಗಿ ಔಷಧಿ ದೊರೆಯಲಿ ಎಂಬ ಸದುದ್ದೇಶದಿಂದ ಸುಮಾರು ೫೦೦ಕ್ಕೂ ಹೆಚ್ಚು ಔಷಧಿಗಳನ್ನೊಳಗೊಂಡ ಜನ ಔಷಧಿ ಕೇಂದ್ರಗಳನ್ನು ತೆರೆದಿದ್ದು, ಮೈಸೂರು ನಗರದಲ್ಲಿ ೩೦, ಗ್ರಾಮಾಂತರದಲ್ಲಿ ೩೧ ಸೇರಿ ೬೧ ಜನೌಷಧಿ ಕೇಂದ್ರಗಳಿವೆ. ಕೇಂದ್ರದಲ್ಲಿ ಕೆಲವೇ ಔಷಧಿಗಳು ಮಾತ್ರ ಲಭ್ಯವಿದ್ದು, ಜನಸಾಮಾನ್ಯರು ಖಾಸಗಿ ಮೆಡಿಕಲ್‌ನಲ್ಲಿ ದುಬಾರಿ ಹಣ ತೆತ್ತು ಪಡೆದುಕೊಳ್ಳುವಂತಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಔಷಧಿಗಳೇ ಜನೌಷಧಿ ಕೆಂದ್ರಗಳಲ್ಲಿ ದೊರೆಯುತ್ತಿವೆ. ಬಿ.ಪಿ, ಶುಗರ್, ಜ್ವರ, ಕೆಮ್ಮು ನೆಗಡಿಯಂತಹ ಕಾಯಿಲೆಗಳಿಗೆ ನೀಡುವ ಆಂಟಿಬೋಂಟೆಕ್ ಔಷಧಿಗಳನ್ನು ಬಿಟ್ಟರೆ ಚರ್ಮ, ಹೃದಯ, ಮೂತ್ರಪಿಂಡ, ಮೂಳೆ ಸಂಬಂಧಿ ಹೀಗೆ ಹಲವು ಕಾಯಿಲೆಗಳಿಗೆ ಔಷಧಿ ಇಲ್ಲದಂತಾಗಿದೆ.
ಔಷಧಿಗಳು ಸ್ಟಾಕ್ ಇಲ್ಲ ಎಂದು ರೋಗಿಗಳು ಒಂದು ಕಡೆ ಹೇಳುತ್ತಿದ್ದರೆ, ಇನ್ನೊಂದು ಕಡೆ ರಾಜ್ಯದ ಒಂದು ಜನೌಷಧಿ ಕೇಂದ್ರದಲ್ಲಿ ಇಡೀ ದೇಶದಲ್ಲೇ ಹೆಚ್ಚು ಔಷಧಿಗಳು ಮಾರಾಟವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಹೀಗಾಗಿ, ಎರಡರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎನ್ನುವ ಗೊಂದಲ ಮೂಡಿದೆ. ಈ ಬಗ್ಗೆ ‘ಆಂದೋಲನ’ ಪತ್ರಿಕೆಯ ಮೈಸೂರು ನಗರದ ಪ್ರಮುಖ ಜನೌಷಧಿ ಕೇಂದ್ರಗಳತ್ತ ಒಂದು ಸುತ್ತು ಹಾಕಿದಾಗ ಸಮಸ್ಯೆ ಇರುವುದು ಕಂಡುಬಂದಿತು.
ಸಮಸ್ಯೆಗಳೇನು?:
ರಜೆ ದಿನ ಬಂದ್
ಜನ ಔಷಧಿ ಮಳಿಗೆ ದಿನದ ೨೪ ಗಂಟೆಯೂ ತೆರೆಯಬೇಕಾಗಿದ್ದು, ಅಂಗಡಿ ತೆರೆಯಲು ನಿಗದಿತ ಸಮಯ ಇಲ್ಲ. ಇನ್ನು ರಜಾ ದಿನಗಳಲ್ಲಿ ಅಂಗಡಿ ಮುಚ್ಚಲಾಗಿದ್ದು, ಲಾಭಾಂಶ ಕಡಿಮೆ ಎಂಬ ಕಾರಣದಿಂದ ಅಂಗಡಿ ಸರಿಯಾಗಿ ತೆರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಔಷಧಿ ಸರಬರಾಜಿನಲ್ಲಿ ನಿರ್ಲಕ್ಷ್ಯ: ಸಾಗಣೆ, ಸಂಪರ್ಕ, ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಪೂರೈಕೆ ಮಾಡುವುದು ಹಾಗೂ ಕೆಲ ರೋಗಿಗಳು ಒಂದೇ ಬಾರಿಗೆ ಹೆಚ್ಚು ಔಷಧಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಈ ಕಾರಣಗಳಿಂದ ಸ್ಟಾಕ್ ಖಾಲಿಯಾಗುತ್ತಿದೆ ಎಂದು ಔಷಧ ಕೇಂದ್ರಗಳವರು ಆರೋಪಿಸಿದ್ದಾರೆ. ಮತ್ತೊಂದು ಕಡೆ ಔಷಧಿಗಳು ಬೇಕೆಂದು ಒತ್ತಾಯಿಸಿದ ಬಳಿಕ ಕೆಲವು ಬಾರಿ ತುರ್ತಾಗಿ ನೀಡುತ್ತಾರೆ. ಕೆಲವು ಬಾರಿ ತಿಂಗಳಾದರು ಔಷಧಿಗಳು ಸಿಗುವುದಿಲ್ಲವೆಂದು ಕೆಲವು ಅಂಗಡಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವಧಿ ಮೀರಿದ ಔಷಧಿಗಳನ್ನು ವಾಪಸ್ ಪಡೆಯದೆ ಈ ಹಿಂದೆ ನಮಗೆ ಸುಮಾರು ೧ರಿಂದ ೨ ಲಕ್ಷ ರೂ. ನಷ್ಟವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಔಷಧಿಗಳನ್ನು ನೀಡುವಾಗಲೇ ರಿಯಾಯಿತಿ ನೀಡುವುದರಿಂದ ನಷ್ಟ ಆಗಿಲ್ಲ. ನಮ್ಮಲ್ಲಿ ಎಲ್ಲಾ ಅಗತ್ಯತೆ ಔಷಧಿಗಳು ಸಿಗುತ್ತವೆ.
-ಕಿಶೋರ್ ಕುಮಾರ್, ಜನೌಷಧಿ ಕೇಂದ್ರದ ಮಾಲೀಕ, ಕುವೆಂಪುನಗರ.

ಕುವೆಂಪುನಗರ ಹಾಗೂ ಜೆಎಸ್‌ಎಸ್ ಹಳೇ ಆಸ್ಪತ್ರೆ ಪಕ್ಕದ ಜನೌಷಧಿ ಕೇಂದ್ರದಲ್ಲಿ ಮಾತ್ರ ಔಷಧಿ ಸಿಗುತ್ತವೆ. ಉಳಿದೆಡೆ ಕೇಳಿದರೆ ನಾವು ಕೇಳಿದ ಔಷಧಿಗಳು ಸ್ಟಾಕ್ ಇಲ್ಲ. ಈಗ ತಾನೆ ಖಾಲಿಯಾಗಿದೆ ಎಂದು ಸಬೂಬು ಹೇಳಿ ಕಳುಹಿಸುತ್ತಾರೆ. ಇದರಿಂದ ನಾವು ಖಾಸಗಿ ಔಷಧಿ ಅಂಗಡಿಗಳಿಂದ ದುಪ್ಪಟ್ಟು ಹಣ ಕೊಟ್ಟು ಔಷಧಿ ಖರೀದಿ ಮಾಡಬೇಕಾಗಿದೆ.
-ಕೆ.ಗೋಪಾಲಕೃಷ್ಣ, ಕೃಷ್ಣಮೂರ್ತಿಪುರಂ.

ಜನೌಷಧಿ ಕೇಂದ್ರಕ್ಕೆ ನಾನು ಈಗಾಗಲೇ ಭೇಟಿ ನೀಡಿದಾಗ ಕಡಿಮೆ ಔಷಧಿಗಳಿರುವುದನ್ನು ಗಮನಿಸಿದ್ದೇನೆ. ಕೇಂದ್ರದಲ್ಲಿ ಜನರಿಗೆ ಅತ್ಯವಶ್ಯಕವಿರುವ ಔಷಧಿಗಳು ಲಭ್ಯವಿರಬೇಕು. ಯಾವುದೇ ಕಾರಣಕ್ಕೂ ಔಷಧವಿಲ್ಲ ಎಂದು ವಾಪಸ್ ಕಳುಹಿಸಬಾರದೆಂದು ತಿಳಿಸಿದ್ದೇನೆ. ಆದರೂ ಅವರು ಔಷಧಿಗಳನ್ನು ತರಿಸದೇ ಇದ್ದರೆ ಅವರಿಗೆ ನೊಟೀಸ್ ನೀಡಿ ಕ್ರಮ ಕೈಕೊಳ್ಳಲಾಗುವುದು.
-ಬಾಗೋಜಿ ಖಾನಾಪುರೆ, ಔಷಧ ನಿಯಂತ್ರಕರು ಬೆಂಗಳೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!