ಮೈಸೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ‘ಸಾವರ್ಕರ್ ರಥಯಾತ್ರೆ’ಗೆ ಚಾಲನೆ ನೀಡಿ ಬಳಿಕ ದಸರಾ ಗಜ ಪಡೆಗಳು ಇರುವ ಸ್ಥಳಕ್ಕೆ ಭೇಟಿ ನೀಡಿ ಆನೆಗಳಿಗೆ ಫಲತಾಂಬೂಲ ನೀಡಿದರು.
ಇಂದು ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ‘ಸಾವರ್ಕರ್ ರಥಯಾತ್ರೆ’ಗೆ ಚಾಲನೆ ನೀಡಿದ್ದಾರೆ. ಈ ಯಾತ್ರೆಯು ಸಾವರ್ಕರ್ ಅವರ ಬಗ್ಗೆ, ಅವರ ದೇಶಭಕ್ತಿ, ಹೋರಾಟಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವೀರ್ ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಗಿದ್ದು, ಯಾತ್ರೆಯು ಟೆರಿಷಿಯನ್ ಕಾಲೇಜು ಮಾರ್ಗವಾಗಿ ಕ್ಯಾತಮಾರನಹಳ್ಳಿ, ತಿಲಕನಗರ, ಮಾತೃ ಮಂಡಳಿ ವೃತ್ತ, ಟೆಂಟ್ ವೃತ್ತ, ವಿವೇಕಾನಂದ ನಗರ, ಚಾಮುಂಡಿಪುರಂ ವೃತ್ತ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚಾರ ಮಾಡಲಿದೆ.
ಆ.24 ರ ನಾಳೆ ಮೈಸೂರು ಜಿಲ್ಲೆಯ ಜಯಪುರ, ಹಂಪಾಪುರ, ಎಚ್.ಡಿ.ಕೋಟೆ, ಸರಗೂರು ಭಾಗಗಳಲ್ಲಿ ರಥಯಾತ್ರೆ ನಡೆಯಲಿದೆ. ಆ.೨೫ರಂದು ನಂಜನಗೂಡು, ಬೇಗೂರು, ಗುಂಡ್ಲುಪೇಟೆ, ತೆರಕಣಾಂಬಿ. ಆ.೨೬ರಂದು ಚಾಮರಾಜನಗರ, ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು, ಕೌದಳ್ಳಿ. ಆ.೨೭ರಂದು ತಿ.ನರಸೀಪುರ, ಬನ್ನೂರು, ಕಿರುಗಾವಲು, ಮಳವಳ್ಳಿ, ಹಲಗೂರು, ಕೆ.ಎಂ.ದೊಡ್ಡಿ, ಮದ್ದೂರು, ಬೇಸಗರಹಳ್ಳಿ. ಆ.೨೮ರಂದು ಕೊಪ್ಪ, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ. ಆ.೨೯ರಂದು ಕಿಕ್ಕೇರಿ, ಕೆ.ಆರ್.ಪೇಟೆ, ಸಾಲಿಗ್ರಾಮ, ಪಿರಿಯಾಪಟ್ಟಣದಲ್ಲಿ ರಥಯಾತ್ರೆ ನಡೆಯಲಿದ್ದು, ಆ.೩೦ರಂದು ಹುಣಸೂರು ಮಾರ್ಗವಾಗಿ ಮೈಸೂರಿಗೆ ಹಿಂದಿರುಗಲಿದೆ. ಬಳಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾರೋಪ ಸಮಾರಂಭ ಜರುಗಲಿದೆ.