Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪದೇಪದೇ ಅಮೆರಿಕಾಕ್ಕೆ ಹೋಗುತ್ತಿರುವುದಕ್ಕೆ ಕಾರಣ ಕೊಟ್ಟ ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಮಂಡ್ಯದ ಮೇಲುಕೋಟೆಯ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಪದೇಪದೇ ಅಮೆರಿಕಾಕ್ಕೆ ತೆರಳುತ್ತಾರೆ ಎಂದು ಕ್ಷೇತ್ರದ ಮತದಾರರು ಕೆಲ ದಿನಗಳ ಹಿಂದೆ ಅಸಮಾಧಾನ ಹೊರಹಾಕಿದ್ದರು. ಶಾಸಕನಾಗಿ ಆಯ್ಕೆಯಾದ ಮೇಲೆ ನಾಲ್ಕನೇ ಬಾರಿಗೆ ಅಮೆರಿಕಾಗೆ ತೆರಳಿದ್ದಾಗ ಮಾಧ್ಯಮದಲ್ಲಿಯೂ ಸುದ್ದಿಯಾಗಿತ್ತು.

ಈ ಕುರಿತು ಇದೀಗ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿದ್ದು ಶಾಸಕನಾಗಿ ಆಯ್ಕೆಯಾದ ಬಳಿಕ ನಾಲ್ಕು ಬಾರಿ ಅಮೆರಿಕಾಕ್ಕೆ ಹೋಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಹೀಗೆ ಮಾಡುವುದು ತಪ್ಪೆಂದು ತಿಳಿದಿದೆ, ನನ್ನ ಕೆಲ ವೈಯಕ್ತಿಕ ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸಿಕೊಳ್ಳಲು ಹೋಗುತ್ತಿದ್ದೇನೆ ಅಷ್ಟೇ ಎಂದೂ ಸಹ ದರ್ಶನ್‌ ಪುಟ್ಟಣ್ಣಯ್ಯ ತಿಳಿಸಿದ್ದಾರೆ. ಈ ಮೂಲಕ ಕಂಪನಿ ಕೆಲಸದ ನಿಮಿತ್ತ ಅಮೆರಿಕಾಗೆ ತೆರಳುತ್ತಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದರು.

ಅಮೆರಿಕಾದಲ್ಲಿ ತನ್ನ ಹೆಂಡತಿ ಹಾಗೂ ಮಕ್ಕಳಿದ್ದು ಅಲ್ಲಿಗೆ ತೆರಳಬೇಕಾಗಿರುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಲಿದ್ದೇನೆ. ನಾನು ಅಮೆರಿಕಾಗೆ ಹೋಗುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ಅಲ್ಲದೇ ನಾನು ಅಮೆರಿಕಾಗೆ ತೆರಳಿದರೂ ಇಲ್ಲಿ ಕೆಲಸ ಮಾಡಲು ತಂಡವನ್ನು ಇಟ್ಟಿದ್ದೇನೆ. ಇಲ್ಲಿ ನನ್ನ ತಂಡದವರು ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಫೋನ್‌ ಮಾಡಿ ಹೇಳಿದ್ರೆ ಮಾತ್ರ ಕೆಲಸ ಆಗೋದು. ಜನರು ನನ್ನ ಬಳಿ ಸಮಸ್ಯೆ ಹೇಳಿಕೊಳ್ಳುತ್ತಾರೆ. ನಾನು ಅದನ್ನು ಅಧಿಕಾರಿಗಳಿಗೆ ತಿಳಿಸಿ ಮಾಡಿಸುತ್ತೇನೆ. ಜನರ ಸಮಸ್ಯೆಗಳು ಬೇಗ ಪರಿಹಾರ ಆಗಬೇಕು. ಶಾಸಕನ ಬಳಿ ಬರುವುದಕ್ಕಿಂತ ಸರ್ಕಾರಿ ಕಚೇರಿಗಳ ಬಳಿ ಹೋಗಬೇಕು. ವ್ಯವಸ್ಥೆ ಬದಲಾಗಬೇಕು ಎಂದು ಅವರು ಹೇಳಿದರು.

ಇನ್ನೂ ಮುಂದುವರಿದು ಮಾತನಾಡಿದ ಅವರು ನಾನು ಈಗಾಗಲೇ ನನ್ನ ಕಂಪನಿಗಳನ್ನು ಮಾರಾಟ ಮಾಡಿದ್ದೇನೆ. 2021ರ ಮೇ 21ರಂದು ಕಂಪನಿಗಳು ಮಾರಾಟವಾಗಿವೆ. ಗೂಗಲ್‌ನಲ್ಲಿ ಚೆಕ್‌ ಮಾಡಿ ನೋಡಿ. ಈಗ ನನಗೂ ಆ ಕಂಪನಿಗಳಿಗೂ ಸಂಬಂಧವಿಲ್ಲ. ಮೈಸೂರಿನಲ್ಲೂ ನನ್ನ ಆಫೀಸ್‌ ಇತ್ತು. ಈಗ ಅದು ಅದರ ಮಾಲೀಕರ ಹೆಸರು ಬೇರೆ ಇದೆ ಎಂದು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ