ಹುಣಸೂರು : ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೬೬ನೇ ಪರಿನಿರ್ವಾಣ ದಿನದ ಅಂಗವಾಗಿ ದಲಿತ ಸಂಘಟನೆಗಳ ಐಕ್ಯತಾ ಸಮಿತಿಯು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಹೆಸರಿನಲ್ಲಿ ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ನಡೆಸಲಿದ್ದು, ಈ ರ‍್ಯಾಲಿಗೆ ಹುಣಸೂರಿನಿಂದ ಸುಮಾರು ಮೂರು ಸಾವಿರ ಜನರು ತೆರಳಲಿದ್ದಾರೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಂಚಾಲಕರಾದ ಜೆ.ಮಹದೇವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯವನ್ನು ನಾಶಕ್ಕೆ ಮುಂದಾಗಿರುವ ಬಿಜೆಪಿ ಸರ್ಕಾರದ ದುರಾಡಳಿತ ವಿರುದ್ಧವಾಗಿ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಹೆಸರಿನಲ್ಲಿ ದಲಿತರ ಬೃಹತ್ ಐತಿಹಾಸಿಕ ಸಮಾವೇಶ ನಡೆಸಲಾಗುತ್ತಿದೆ ಎಂದರು.
ಇಡೀ ದೇಶವನ್ನು ಕಾರ್ಪೊರೇಟ್ ಕಂಪನಿಗಳ ಕೈಗಿಟ್ಟು, ದೇಶವನ್ನೇ ಖಾಸಗೀಕರಣ ಮಾಡಿ ಮೀಸಲಾತಿಯ ಆಶಯವನ್ನೇ ನಿರ್ನಾಮ ಮಾಡಿ, ದಲಿತರ ಅಭಿವೃದ್ಧಿಯನ್ನು ಸಾರಾಸಗಟಾಗಿ ನಿರ್ಲಕ್ಷಿಸಲಾಗುತ್ತಿದೆ. ಹಾಗಾಗಿ ದಲಿತರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಬಂದೊದಗಿದೆ ಎಂದರು.
ದಸಂಸ ಸಂಚಾಲಕರಾದ ರತ್ನಪುರಿ ಪುಟ್ಟಸ್ವಾಮಿ, ದೇವರಾಜ ಕಟ್ಟೆಮಳಲವಾಡಿ, ಕೃಷ್ಣ ಕೊಳಘಟ್ಟ, ರಾಮಕೃಷ್ಣ ಅತ್ತಿಗುಪ್ಪೆ, ಪ್ರಕಾಶ್ ಮುತ್ತುರಾಯನಹೊಸಳ್ಳಿ ಹಾಗೂ ಹಿರಿಯ ದಲಿತ ಮುಖಂಡರಾದ ವರದರಾಜು, ಶಿವರಾಜ್, ರಾಜು ಹಾಜರಿದ್ದರು.





