Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕ್ರಿಕೆಟ್‌ನಲ್ಲಿ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ: ಜಿ.ಆರ್.ವಿಶ್ವನಾಥ್

ಕ್ರಿಕೆಟ್ ಲೋಕದ ದಂತಕತೆ ಜಿ.ಆರ್.ವಿಶ್ವನಾಥ್ ಅವರ ಕ್ರಿಕೆಟ್ ಜೀವನ ಕುರಿತು ರಚಿಸಿರುವ ‘ರಿಸ್ಟ್ ಅಶ್ಯೂರ್ಡ್’ ಪುಸ್ತಕ ಕುರಿತ ಸಂದರ್ಶನ

* ಶ್ರೇಷ್ಠವಾದ ಟೆಸ್ಟ್ ಮಾದರಿಯ ಪಂದ್ಯಗಳಿಗೆ ಮನ್ನಣೆ ಕಡಿಮೆಯಾಗುತ್ತಿರುವುದು ಸರಿಯಲ್ಲ

ಮೈಸೂರು: ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯೆನಿಸಿದ ಕ್ರಿಕೆಟ್‌ನಲ್ಲಿ ಕಾಲಕಾಲಕ್ಕೆ ಅಂದರೆ ಕನಿಷ್ಠ ಒಂದು ದಶಕಕ್ಕೊಮ್ಮೆ ಬದಲಾವಣೆಗಳು ಆಗುತ್ತಿರುತ್ತವೆ. ಇದಕ್ಕೆ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂಬುದಾಗಿ ಅಂತಾರಾಷ್ಟ್ರೀಯ ಹಿರಿಯ ಕ್ರಿಕೆಟಿಗ, ಕ್ರಿಕೆಟ್ ಲೋಕದ ದಂತಕತೆ ಎನಿಸಿರುವ ಕರ್ನಾಟಕದ ಜಿ.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ವತಿಯಿಂದ ಗಾಯತ್ರಿದೇವಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವನಾಥ್ ಅವರ ಕ್ರಿಕೆಟ್ ಜೀವನ ಕುರಿತು ಪತ್ರಕರ್ತ ಆರ್.ಕೌಶಿಕ್ ಅವರು ರಚಿಸಿರುವ ‘ರಿಸ್ಟ್ ಅಶ್ಯೂರ್ಡ್’ ಎಂಬ ಪುಸ್ತಕ ಕುರಿತ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಪುಸ್ತಕ ಬರೆಯುವ ಕುರಿತು ಹಲವು ಪತ್ರಕರ್ತರು ನನ್ನ ಬಳಿ ಬಂದು ಪ್ರಸ್ತಾಪಿಸಿದರು. ಆದರೆ ನಾನು ಆ ಬಗ್ಗೆ ಆಸಕ್ತಿ ವಹಿಸಿರಲಿಲ್ಲ. ನನಗೆ ೭೦ ವರ್ಷ ತುಂಬಿದ ನಂತರ ಕೆಲವರು ನೀವು ಕ್ರಿಕೆಟ್ ಜಗತ್ತಿನಲ್ಲಿ ಹಿರಿಯರಾಗಿದ್ದೀರಿ, ಮುಂದಿನ ಪೀಳಿಗೆಗೆ ನಿಮ್ಮ ಕ್ರಿಕೆಟ್ ಬದುಕು ಮಾದರಿಯಾಗಲಿದೆ ಎಂಬುದಾಗಿ ಮನವರಿಕೆ ಮಾಡಿಕೊಟ್ಟರು. ನನಗೂ ಇದು ಸರಿಯೆನಿಸಿತು. ನಮ್ಮ ಕುಟುಂಬದೊಂದಿಗೆ ಚರ್ಚಿಸಿ ಪತ್ರಕರ್ತ ಆರ್.ಕೌಶಿಕ್ ಅವರ ಪ್ರಸ್ತಾಪಕ್ಕೆ ಸಮ್ಮತಿಸಿದೆ. ಹಾಗಾಗಿ ಇಂದು ಈ ಪುಸ್ತಕ ಹೊರಬರಲು ಸಾಧ್ಯವಾಯಿತು. ಇದರಲ್ಲಿ ನನ್ನ ಕ್ರಿಕೆಟ್ ಜೀವನದ ಹಲವು ಪ್ರಮುಖ ಅಂಶಗಳು ಅಡಕವಾಗಿದೆ ಎಂದು ಹೇಳಿದರು.

ಕ್ರಿಕೆಟ್‌ನಲ್ಲಿ ಟೆಸ್ಟ್ ಮಾದರಿಯ ಪಂದ್ಯಗಳು ಅತ್ಯಂತ ಶ್ರೇಷ್ಠವಾದವು. ಈಗ ಇದಕ್ಕೆ ಮನ್ನಣೆ ಕಡಿಮೆಯಾಗುತ್ತಿದೆ ಎನಿಸುತ್ತಿದೆ. ಇದು ಸರಿಯಲ್ಲ. ರಣಜಿ ಕ್ರಿಕೆಟ್ ಮಾದರಿಯ ಪಂದ್ಯಗಳು ಹಿಂದೆ ಅತ್ಯಂತ ಜನಪ್ರಿಯವಾಗಿದ್ದವು. ಹಲವು ಕ್ರಿಕೆಟ್ ದಿಗ್ಗಜರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇವು ಪರಿಚಯಿಸಿವೆ. ಹೊಸ ಆಟಗಾರರಿಗೆ ರಣಿಜಿ ಕ್ರಿಕೆಟ್‌ನಲ್ಲಿ ಆಡಬೇಕೆಂಬ ಉತ್ಸಾಹ ಇರುತ್ತಿತ್ತು. ಇದು ಅವರ ಆಟದ ಸಾಮರ್ಥ್ಯ ಪ್ರದರ್ಶನದ ಮಾನದಂಡವೂ ಆಗಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ರಣಜಿ ಕ್ರಿಕೆಟ್‌ಗೆ ಮಾನ್ಯತೆ ಕಡಿಮೆಯಾಗಿದೆ. ಎಲ್ಲರೂ ಐಪಿಎಲ್ ಕ್ರಿಕೆಟ್‌ನತ್ತ ಮಾರುಹೋಗಿದ್ದಾರೆ. ಕ್ರಿಕೆಟ್ ಆಟಗಾರರನ್ನು ವ್ಯಾಪರಿ ಮನೋಭಾವದಿಂದ ನೋಡುವ ಪರಿಪಾಠ ಸರಿಯಾದ ಕ್ರಮವಲ್ಲ ಎಂದು ಹೇಳಿದರು.

೧೯೭೧ರಲ್ಲಿ ಗ್ವಾಲಿಯರ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯ ಆಡಲು ಕರ್ನಟಕದವರೇ ಆದ ಚಂದ್ರಶೇಖರ್, ಪ್ರಸನ್ನ ಅವರ ಜತೆ ತೆರಳಿದ್ದ ಸಂದರ್ಭದಲ್ಲಿ ಚೆಂಬಲ್ ಕಣಿವೆ ಹಾದಿಯಲ್ಲಿ ದರೋಡೆಕೋರರಿಗೆ ಸಿಲುಕಿ ಅನುಭವಿಸಿದ ಕಷ್ಟವನ್ನು ಹಂಚಿಕೊಂಡರು. ಕೊನೆಗೆ ಮಹಾರಾಜ ಸಿಂಧ್ಯಾ ಅವರ ನೆರವಿನಿಂದ ಪಾರಾದೆವು. ಆದರೆ ಇದು ಪಟೌಡಿ ಅವರು ನಮ್ಮನ್ನು ಹೆದರಿಸಲು ರೂಪಿಸಿದ್ದ ಫ್ರಾಂಕ್ ಎಂಬುದಾಗಿ ಕೆಲ ದಿನಗಳ ನಂತರ ತಿಳಿಯಿತು ಎಂದು ಹೇಳಿದಾಗ ನೆರೆದಿದ್ದವರನ್ನು ನಗೆಗಡಲಲ್ಲಿ ಮುಳುಗಿಸಿತು.

ಕ್ರಿಕೆಟ್‌ನಲ್ಲಿ ಕೌಶಲತೆ ಮುಖ್ಯ, ಇದರಿಂದಲೇ ನಾನು ಮುಂದೆ ಬಂದದ್ದು. ಆರಂಭದಲ್ಲಿ ಟೆನ್ನಿಸ್ ಬಾಲ್ ಬಳಸಿ ಆಡುವಾಗ ಈ ಕೌಶಲವನ್ನು ರೂಢಿಸಿಕೊಂಡೆ, ನಾನು ಆಡಿದ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ ಗಳಿಸಿದ್ದು ಶೂನ್ಯ. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದೆ. ಕ್ರಿಕೆಟ್‌ನಲ್ಲಿ ಭಯವಿಲ್ಲದೆ ಆಡುವುದು ಮುಖ್ಯ. ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ತಮ್ಮ ಅನುಭವ ಹಂಚಿಕೊಂಡರು.

ನಾನು ಆಡಿದ ಪಂದ್ಯಗಳಲ್ಲಿ ೧೪ ಶತಕಗಳಿಸಿದ್ದೇನೆ. ನಾನು ಶತಕ ಗಳಿಸಿದ ಎಲ್ಲ ಪಂದ್ಯಗಳಲ್ಲೂ ಭಾರತ ತಂಡ ಗೆಲವು ಸಾಧಿಸಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆರು ಸಾವಿರ ರನ್ ಗಳಿಸಿರುವುದಾಗಿ ಹೇಳಿದರು. ಕನ್ನಡಿಗರು ಮೃದು ಸ್ವಭಾವದವರು. ಆದರೆ ಛಲವಂತರು, ಹಾಗಾಗಿ ಪ್ರಸನ್ನ, ಚಂದ್ರಶೇಖರ್, ಕಿರ್ಮಾನಿ, ಕುಂಬ್ಳೆ, ಜಾವಗಲ್ ವಿಶ್ವನಾಥ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಷಿಯಂತಹ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ನಾನು ಕರ್ನಾಟಕದನು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.

ಸಂದರ್ಶನ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್ ನಡೆಸಿಕೊಟ್ಟರು. ಇದಕ್ಕೂ ಮುನ್ನ ಕಾರ್ಯಕ್ರಮವನ್ನು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಉದ್ಘಾಟಿಸಿದರು.


ನಾನು ಆಟವಾಡುತ್ತಿದ್ದ ಸಂದರ್ಭದಲ್ಲಿ ಪಿಚ್ ಹೇಗಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಬೌಲರ್ ಯಾರು ಎಂದು ನೋಡುತ್ತಿದ್ದೆ. ದಂಡಿಸುವುದೇ ನಮ್ಮ ಆದ್ಯತೆಯಾಗಿತ್ತು. ಕ್ರಿಕೆಟ್‌ನಲ್ಲಿ ಬ್ಯಾಟ್ ಶಕ್ತಿ ಪ್ರದರ್ಸನವೇ ನನಗೆ ಮುಖ್ಯವಾಗಿತ್ತು. ಮನ್ಸೂರ್ ಆಲಿಖಾನ್ ಪಟೌಡಿ ಅವರು ನನಗೆ ಸ್ಫೂರ್ತಿ. ಅವರ ನಾಯಕತ್ವದ ಹಲವು ಪಂದ್ಯಗಳಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಅವರು ಅತ್ಯಂತ ಶ್ರೇಷ್ಠ ವ್ಯಕ್ತಿತ್ವದ ಮಾದರಿ ಕ್ರಿಕೆಟಿಗ. ಅವರ ಪ್ರೋತ್ಸಾಹ ನನ್ನನ್ನು ಓರ್ವ ಪ್ರತಿಭಾವಂತ ಕ್ರಿಕೆಟಿಗನನ್ನಾಗಿ ರೂಪಿಸಿತು.

-ಜಿ.ಆರ್.ವಿಶ್ವನಾಥ್, ಮಾಜಿ ಕ್ರಿಕೆಟಿಗ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ