ನಾಲ್ಕು ವರ್ಷದ ಬಾಲಕಿಗೆ ಕಾಣಿಸಿಕೊಂಡ ಮೆದುಳು ಜ್ವರ
ಹನೂರು ತಾಲ್ಲೂಕಿನಲ್ಲಿ ಪ್ರಕರಣ ಪತ್ತೆ
ಹನೂರು: ಜಿಲ್ಲೆಯಲ್ಲಿಯೇ ಇದೇ ಮೊದಲ ಬಾರಿಗೆ ಮೆದುಳು ಜ್ವರ ಪ್ರಕರಣವು ಹನೂರು ಪಟ್ಟಣದ 10ನೇ ವಾರ್ಡಿನಲ್ಲಿ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಪಟ್ಟಣದ 4 ವರ್ಷದ ಬಾಲಕಿಗೆ ಮೆದುಳು ಜ್ವರ ಕಾಣಿಸಿಕೊಂಡಿದ್ದು ಕೂಡ್ಲೂರು ಗ್ರಾಮದಲ್ಲೂ ಶಂಕಿತ ಮೆದುಳು ಜ್ವರ ಪ್ರಕರಣ ಬೆಳಕಿಗೆ ಬಂದಿರುವುದು ಜಿಲ್ಲೆಯ ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಮೆದುಳು ಜ್ವರ ಕಾಣಿಸಿಕೊಳ್ಳಲು ಅನೈರ್ಮಲ್ಯ ತಾಂಡವವಾಡುತ್ತಿರುವುದೇ ಕಾರಣವಾಗಿದ್ದು ಹನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10ನೇ ವಾರ್ಡಿನ ಬನ್ನಿಮಂಟಪ ಬಡಾವಣೆಯಲ್ಲಿ ಸಮರ್ಪಕ ಸಿಸಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆ ಮುಂದಿನ ಖಾಲಿ ನಿವೇಶನದಲ್ಲಿ ಕೊಳಚೆ ನೀರು ಮಡುಗಟ್ಟಿದೆ. ಕಸ ಕಡ್ಡಿಗಳು ಕೊಳಚೆ ನೀರಿನಲ್ಲಿ ಕೊಳೆತು ಗಬ್ಬು ನಾರುತ್ತಿದ್ದು ಪಪಂ ನಿರ್ಲಕ್ಷ್ಯಕ್ಕೆ ಜನರು ಈಗ ಮೆದುಳು ಜ್ವರ ವಕ್ಕರಿಸುವ ಭೀತಿಯಲ್ಲಿದ್ದಾರೆ.
ಮೆದುಳು ಜ್ವರ ಕಾಣಿಸಿಕೊಂಡ ಹಿನ್ನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪುಷ್ಪರಾಣಿ ಹಾಗೂ ಸಿಬ್ಬಂದಿ ವಾರ್ಡ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿದ್ದು ಬಾಲಕಿ ಕುಟುಂಬಸ್ಥರಿಗೆ ಆತಂಕಗೊಳ್ಳದಂತೆ ಧೈರ್ಯ ಹೇಳಿ ಬಂದಿದ್ದಾರೆ.
ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಪ್ರತಿಯೊಬ್ಬರು ಕಸವನ್ನು ನಿಗದಿತ ಸ್ಥಳದಲ್ಲಿ ಹಾಕಿ ಕೊಳೆಯದಂತೆ ಎಚ್ಚರ ವಹಿಸಬೇಕು, ನಮ್ಮ ಸುತ್ತಲೂ ಸ್ವಚ್ಛತೆ ಇದ್ದರೆ ಯಾವುದೇ ಸೊಳ್ಳೆ ಸೇರಿದಂತೆ ಇನ್ನಿತರ ಕ್ರಿಮಿಕೀಟಗಳು ಕಾಟ ಇರುವುದಿಲ್ಲ, ನಿವಾಸಿಗಳು ಚರಂಡಿ ಇಲ್ಲದೆ ಇರುವುದರಿಂದ ತಮ್ಮ ಮನೆಗಳ ಮುಂದೆ ಇಂಗು ಗುಂಡಿ ನಿರ್ಮಾಣ ಮಾಡಿ ಕೊಳಚೆ ನೀರನ್ನು ಬಿಡಬೇಕು ಇದರಿಂದ ಯಾವುದೇ ರೋಗಗಳು ಬರುವುದಿಲ್ಲ ಎಂದು ಪುಷ್ಪಾರಾಣಿ ನಿವಾಸಿಗಳಿಗೆ ಹೇಳಿದ್ದಾರೆ.
ಇನ್ನು, ಮೆದುಳು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಹತ್ತನೇ ವಾರ್ಡಿನ ಎಲ್ಲಾ ಬಡಾವಣೆಗಳಿಗೆ ಬ್ಲೀಚಿಂಗ್ ಪೌಡರ್ ಹಾಗೂ ಫೆನಾಯಿಲ್ ಸಿಂಪಡಿಸಲಾಗಿದೆ.
ಮೆದುಳು ಜ್ವರದ ಲಕ್ಷಣಗಳು:
Japanese Encephalitis ಎಂದು ಕರೆಯಲ್ಪಡುವ ಮೆದುಳು ಜ್ವರವು ವೈರಾಣುವಿನಿಂದ ಉಂಟಾಗುವರೋಗ. ಈ ರೋಗವು ಸೋಂಕಿರುವ ಹಂದಿಗಳಿಂದ ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಹರಡುತ್ತದೆ. ಮಾನವನಿಗೆ ಇದು ಆಕಸ್ಮಿಕವಾಗಿ ತಗಲುತ್ತದೆ. ಈ ರೋಗಕ್ಕೆ ಹೆಚ್ಚಾಗಿ ಮಕ್ಕಳು ತುತ್ತಾಗುತ್ತಾರೆ.
ಮೆದುಳು ಜ್ವರದ ಲಕ್ಷಣಗಳು
ಜ್ವರ
ತಲೆನೋವು
ಕತ್ತಿನ ಬಿಗಿತ
ತಲೆಸುತ್ತುವಿಕೆ
ಮೈ ನಡುಕ
ಎಚ್ಚರ ತಪ್ಪುವುದು ಮುಂತಾದವು
ಖಾಯಿಲೆಯು ಉಲ್ಬಣಗೊಂಡಾಗ ಮೆದುಳು ಊತಗೊಂಡು ಸಾವು ಸಂಭವಿಸಬಹುದು.
ಮೆದುಳು ಜ್ವರ ಬಂದಿರುವುದರಿಂದ ಪಟ್ಟಣದ ನಾಗರಿಕರು ಭಯ ಬೀಳುವ ಅಗತ್ಯವಿಲ್ಲ, ಈ ಜ್ವರಕ್ಕೆ ಸೂಕ್ತ ಚಿಕಿತ್ಸೆ ಇದ್ದು ಬಾಲಕಿ ಬೇಗ ಗುಣವಾಗುತ್ತಾಳೆ
– ವೈದ್ಯಾಧಿಕಾರಿ ಡಾ.ಪುಷ್ಪಾರಾಣಿ
ವಾರ್ಡಿನಲ್ಲಿ ಸಮರ್ಪಕ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಪಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ, ಈಗ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿದೆ.
-ಟಿ.ಸೋಮಶೇಖರ್, ಪಪಂ ಸದಸ್ಯ