ಚಾಮರಾಜನಗರ: ಯೋಗಪಟುವೊಬ್ಬರು ಯೋಗ ಮಾಡುತ್ತಲೇ ನೀರಿನಲ್ಲಿ ಪ್ರಾಣ ಬಿಟ್ಟಿರುವ ಘಟನೆ ಚಾಮರಾಜನಗರದ ಕೊಳ್ಳೇಗಾಲದ ದಾಸನಪುರ ಬಳಿ ಹರಿಯುವ ಕಾವೇರಿ ನದಿಯಲ್ಲಿ ನಡೆದಿದೆ.
ಕೊಳ್ಳೇಗಾಲ ಪಟ್ಟಣದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನದ ಬಡಾವಣೆಯ ನಾಗರಾಜು ಎಂಬುವವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ನಾಗರಾಜು ಅವರು ತೀರ್ಥ ಸ್ನಾನ ಮಾಡಲೆಂದು ನದಿಗೆ ಇಳಿದಿದ್ದರು. ನದಿ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಿದ್ದರು. ಎಷ್ಟು ಹೊತ್ತಾದರೂ ತೇಲುವ ಸ್ಥಿತಿಯಲ್ಲಿಯೇ ಇದ್ದರು. ಈ ವೇಳೆ ಜೊತೆಗೆ ಬಂದಿದ್ದವರು ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.
ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.





