ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಮೇಲ್ಛಾವಣಿಯನ್ನು ಧ್ವಂಸಗೊಳಿಸಿದೆ. ಘಟನೆಯಿಂದ ಅಂಗಡಿಗೆ ಹಾನಿಯಾಗಿದ್ದು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೇವಸ್ಥಾನದ ಮುಖ್ಯ ಮೆಟ್ಟಿಲುಗಳ ಪಕ್ಕದಲ್ಲಿರುವ ಅಂಗಡಿಯ ಮೇಲೆ ರಾತ್ರಿ ವೇಳೆ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಮೇಲ್ಛಾವಣಿಯ ಶೀಟ್ಗಳು ಹಾಗೂ ಕಬ್ಬಿಣದ ಸರಳುಗಳು ಮುರಿದು ಬಿದ್ದಿವೆ.
ಅಂಗಡಿ ಮಾಲೀಕ ಸಂತೋಷ್ ಮಾತನಾಡಿ ನನ್ನ ಅಂಗಡಿಯ ಮೇಲೆ ಕಾಡಾನೆ ಪದೇಪದೇ ದಾಳಿ ನಡೆಸಿ ಹಾನಿ ಮಾಡುತ್ತಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟವಾಗಿದ್ದು, ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಅಂಗಡಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇನೆ. ಅರಣ್ಯ ಇಲಾಖೆ ಹಾಗೂ ತಹಸೀಲ್ದಾರ್ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ನೀಡುವುದರ ಜತೆಗೆ ಕಾಡಾನೆಗಳಿಂದ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕು ಹಾಗೂ ದೇವಸ್ಥಾನದ ಸುತ್ತಮುತ್ತಲಿನ ಅಂಗಡಿಗಳಿಗೆ ಕಾಡಾನೆಗಳಿಂದ ರಕ್ಷಣೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.




