ಚಾಮರಾಜನಗರ: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆ ಮಾಡಿದ್ದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಮುಡಿಗುಂಡ ಗ್ರಾಮದ ಕುಮಾರ್ ಎಂಬಾತನೇ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.
ಸುಮಾರು 10 ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಚಿನ್ನಮ್ಮ ಎಂಬುವವರನ್ನು ಆರೋಪಿ ಕುಮಾರ್ ಮದುವೆಯಾಗಿದ್ದು, ಇವರಿಗೆ ಒಬ್ಬ ಮಗ ಕೂಡ ಇದ್ದನು.
ಈ ಮಧ್ಯೆ ಆರೋಪಿ ಕುಮಾರ್ ಹೆಂಡತಿ ಚಿನ್ನಮ್ಮಳ ಶೀಲದ ಮೇಲೆ ಪದೇ ಪದೇ ಅನುಮಾನಪಡುತ್ತಿದ್ದ. ಗಂಡನ ಕಾಟ ತಾಳಲಾರದೇ ಚಿನ್ನಮ್ಮ ತವರು ಮನೆಗೆ ಹೋಗಿ ಅಲ್ಲೇ ಉಳಿದುಕೊಂಡಿದ್ದಳು.
ಈ ವೇಳೆ ಕುಮಾರ್ ತವರು ಮನೆಗೆ ಹೋಗಿ ಚೆನ್ನಾಗಿ ನೋಡಿಕೊಳ್ಳುವುದಾಗಿ ನಂಬಿಸಿ ಹೆಂಡತಿ ಚಿನ್ನಮ್ಮ ಹಾಗೂ ಪುತ್ರ ದರ್ಶನ್‌ನನ್ನು ಮನೆಗೆ ವಾಪಸ್ ಕರೆದುಕೊಂಡು ಬಂದಿದ್ದ.
ಆದರೆ ಹಳೆಯ ಚಾಳಿ ಬಿಡದ ಆರೋಪಿ ಕುಮಾರ್ ಚಿನ್ನಮ್ಮಳ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.





