Mysore
21
overcast clouds

Social Media

ಬುಧವಾರ, 19 ಆಗಸ್ಟ್ 2026
Light
Dark

ಮಾರ್ಟಳ್ಳಿಯಲ್ಲಿ ಮರೀಚಿಕೆಯಾದ ಸ್ವಚ್ಛತೆ: ಗ್ರಾಮಸ್ಥರ ಆಕ್ರೋಶ

ಹನೂರು: ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿಯಲ್ಲಿ ಸದ್ಯ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.

ಗ್ರಾಮದ ಯಾವ ದಿಕ್ಕಿನಲ್ಲಿ ನೋಡಿದರೂ ಕಸದ ರಾಶಿಗಳೇ ಕಣ್ಣಿಗೆ ಬೀಳುತ್ತಿದ್ದು, ಪಂಚಾಯಿತಿ ಆಡಳಿತವು ಕಸ ವಿಲೇವಾರಿ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುರ್ನಾತ ಬೀರುತ್ತಿರುವ ಮುಖ್ಯ ರಸ್ತೆಗಳು: ಮಾರ್ಟಳ್ಳಿ ಗ್ರಾಮದ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಕಸದ ರಾಶಿಗಳು ಬಿದ್ದಿದ್ದು, ಸುತ್ತಮುತ್ತಲ ಪ್ರದೇಶವೆಲ್ಲಾ ಗಬ್ಬು ನಾರುತ್ತಿದೆ. ಮಾರ್ಟಳ್ಳಿಯಿಂದ ನಾಲ್ ರೋಡ್ ಮಾರ್ಗದ ರಸ್ತೆಯಲ್ಲಂತೂ ಪರಿಸ್ಥಿತಿ ಮಿತಿಮೀರಿದ್ದು, ಈ ಭಾಗದಲ್ಲಿ ಬ್ಯಾಂಕ್, ಬೇಕರಿ ಮತ್ತು ಇತರ ವ್ಯಾಪಾರ ಮಳಿಗೆಗಳಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಎಲ್ಲೆಂದರಲ್ಲಿ ಕಾಣಿಸಿರುವ ​ಚಿಕನ್ ತ್ಯಾಜ್ಯ: ಕೇವಲ ಪ್ಲಾಸ್ಟಿಕ್ ಮತ್ತು ಮನೆಯ ತ್ಯಾಜ್ಯವಲ್ಲದೆ, ಮಾಂಸದ ಅಂಗಡಿಗಳಿಂದ ಹೊರಬರುವ ಚಿಕನ್ ತ್ಯಾಜ್ಯವನ್ನು ಸಹ ಇಲ್ಲಿಯೇ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಬೀದಿ ನಾಯಿಗಳು ಮತ್ತು ಹಸುಗಳು ಈ ತ್ಯಾಜ್ಯವನ್ನು ರಸ್ತೆಯಾದ್ಯಂತ ಚೆಲ್ಲಾಪಿಲ್ಲಿ ಮಾಡುತ್ತಿದ್ದು, ರೋಗರುಜಿನಗಳ ಭೀತಿ ಎದುರಾಗಿದೆ.

​ಬಳಕೆಯಾಗದ ಸ್ವಚ್ಛತಾ ವಾಹನ: ಮಾರ್ಟಳ್ಳಿ ಪಂಚಾಯಿತಿಗೆ ಕಸ ವಿಲೇವಾರಿಗಾಗಿ ವಾಹನ ಬಂದು 5 ವರ್ಷ ಕಳೆದಿದ್ದರೂ, ಇದುವರೆಗೂ ಅದು ಬಳಕೆಗೆ ಬಾರದೆ ಧೂಳು ಹಿಡಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. “ಕೇಂದ್ರ ಸ್ಥಾನವಾದ ಮಾರ್ಟಳ್ಳಿಯಲ್ಲೇ ಈ ಪರಿಸ್ಥಿತಿ ಇದ್ದರೆ, ಇನ್ನುಳಿದ ಗ್ರಾಮಗಳ ಗತಿ ಏನು? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು, ಚಿಕನ್ ತ್ಯಾಜ್ಯ ಸೇರಿದಂತೆ ಎಲ್ಲ ಕಸವನ್ನು ವಿಲೇವಾರಿ ಮಾಡಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 

Tags:
error: Content is protected !!