Mysore
19
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ

ಹನೂರು: ಜೀವನದಲ್ಲಿ ಪರಿವರ್ತನೆಗೊಂಡ ಮನುಷ್ಯ ಯಾವ ರೀತಿ ವ್ಯಕ್ತಿಯಾಗಿ ರೂಪಾಂತರಗೊಳ್ಳುತ್ತಾರೆ ಎಂಬುದಕ್ಕೆ ಬೇಡನಾಗಿ, ರತ್ನಾಕರ ವಾಲ್ಮೀಕಿಯಾಗಿ ಬದಲಾಗಿ ರಾಮಾಯಣ ರಚಿಸಿರುವುದೇ ಸಾಕ್ಷಿ ಎಂದು ಮಾಜಿ ಶಾಸಕ ಆರ್ ನರೇಂದ್ರ ಬಣ್ಣಿಸಿದ್ದಾರೆ.

ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗದ ಆದಿಕವಿ ವಾಲ್ಮೀಕಿ ಪ್ರಸ್ತುತ ಯುವ ಜಗತ್ತಿನ ಪರಿವರ್ತನೆಗೆ ದಾರಿದೀಪ, ವಾಲ್ಮೀಕಿ ಮಹರ್ಷಿಗಳ ಇತಿಹಾಸವನ್ನು ತಿಳಿದುಕೊಂಡು ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದೂ ಸಂಸ್ಕೃತಿಯ ಮಹಾನ್ ಗ್ರಂಥ ರಾಮಾಯಣವಾಗಿದ್ದು ಇದರ ಸಾರ ತಿಳಿದುಕೊಂಡರೆ ಬದುಕು ಪಾವನವಾಗಲಿದೆ. ಹಿಂದುಳಿದ ಸಮುದಾಯದಲ್ಲಿ ಬಹುತೇಕರು ಹುಟ್ಟಿ ನಾಡಿಗೆ ಅಮೂಲ್ಯ ಕಾಣಿಕೆ ನೀಡಿದ್ದಾರೆ ಎನ್ನುವುದಕ್ಕೆ ಅದಿಕವಿ ವಾಲ್ಮೀಕಿಗಳ ಜೀವನ ಚರಿತ್ರೆ ಸಾಕ್ಷಿಯಾಗಿದೆ, ಬೇಡನಾದ ರತ್ನಾಕರ ನಾರದ ಮುನಿಗಳ ಆಶೀರ್ವಚನದಂತೆ ರಾಮನಾಮ ಪಠಿಸಿ ಮಹಾನ್ ದಾರ್ಶನಿಕರಾಗಿ ವಾಲ್ಮೀಕಿಯಾಗಿದ್ದಾರೆ. ಇವರ ರಾಮಾಯಣ ಗ್ರಂಥ ಹಿಂದೂ ಧರ್ಮದಲ್ಲಿನ ಪವಿತ್ರ ಗ್ರಂಥವಾಗಿದೆ ಎಂದರು.

ಯಾವುದೇ ಒಂದು ಸಾಹಿತ್ಯ ರಚನೆಯಾದರೆ, ಆ ಸಾಹಿತ್ಯವು ಕೇವಲ ಆ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗುತ್ತದೆ. ಆದರೆ ಸಾವಿರಾರು ವರ್ಷಗಳ ಹಿಂದೆ ಬರೆದಂತಹ ರಾಮಾಯಣ ಮಹಾಕಾವ್ಯಯು ಇಂದಿಗೂ ಕೂಡ ಪ್ರಸ್ತುತವಾಗಿದ್ದು, ಮುಂದೆ ಸೂರ್ಯ ಚಂದ್ರ ಇರುವವರೆಗೂ ಪ್ರಸ್ತುತವಾಗಿರುತ್ತದೆ. ರಾಮಾಯಣ ಮಹಾಕಾವ್ಯದಲ್ಲಿ ಅಷ್ಟೊಂದು ನೈತಿಕ ಮೌಲ್ಯಗಳು ಅಡಗಿದೆ ಎಂದರು.

ಪ್ರಪಂಚದ ಮೊದಲ ಮಹಾಕಾವ್ಯವು ಸುಮಾರು 24 ಸಾವಿರ ಶ್ಲೋಕಗಳನ್ನು ಒಳಗೊಂಡಿದ್ದು, ಈ ಮಹಾಕಾವ್ಯದ ನೆಲೆಗಟ್ಟಿನಲ್ಲಿ ದೇಶದ ಎಲ್ಲಾ ಭಾಷೆಗಳಲ್ಲಿಯೂ ರಾಮಾಯಣ ಕಾವ್ಯವು ರಚಿತವಾಗಲು ಮಹರ್ಷಿ ವಾಲ್ಮೀಕಿ ಅವರು ಕಾರಣರಾಗಿದ್ದಾರೆ. ಕುವೆಂಪು, ಪಂಪ ಕವಿಗಳು ಸೇರಿದಂತೆ ಇನ್ನಿತರ ಕವಿಗಳು ರಾಮಾಯಣವನ್ನು ಬರೆಯಲು ವಾಲ್ಮೀಕಿಯ ಸಂಸ್ಕೃತ ಭಾಷೆಯ ರಾಮಾಯಣ ಮೂಲದಾರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್, ಚಾಮುಲ್ ನಿರ್ದೇಶಕ ಶಾಹುಲ್ ಅಹಮದ್, ನಾಯಕ ಸಮಾಜದ ತಾಲೂಕು ಅಧ್ಯಕ್ಷ ಪುಟ್ಟ ವೀರನಾಯಕ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸಿದ್ದರಾಜು, ಯಡಕುರಿಯ ಮಹಾದೇವ, ನಾಗೇಂದ್ರ ಮೂರ್ತಿ, ನಟರಾಜ ಗೌಡ, ಕೌದಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು ಯುವ ಮುಖಂಡರಾದ ಅರುಣ್, ವೆಂಕಟಾಚಲ ಸೇರಿದಂತೆ ಇನ್ನಿತರರು ಹಾಜರಿದ್ದರು.

 

 

Tags:
error: Content is protected !!