ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯ ಹನೂರು ಬಫರ್ ವಲಯದ ಪಚ್ಚೆ ದೊಡ್ಡಿಗಸ್ತಿನ ಸುಂಕದಕಟ್ಟೆ ಅರಣ್ಯ ಪ್ರದೇಶದ ಉಡುತೊರೆ ಹಳ್ಳದಲ್ಲಿ ಸಫಾರಿಗರಿಗೆ ಹುಲಿ ಕಾಣಿಸಿಕೊಂಡಿದ್ದು ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
೧೫ ದಿನಗಳಿಂದ ಸತತವಾಗಿ ಬಿದ್ದ ಮಳೆಗೆ ಅರಣ್ಯವು ಅಚ್ಚ ಹಸಿರಿನಿಂದ ಕೂಡಿದ್ದು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಇದಲ್ಲದೆ ಬೈಲೂರು ಅರಣ್ಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುತೊರೆ ಹಳ್ಳದಲ್ಲಿ ನೀರು ಬರಲು ಪ್ರಾರಂಭವಾಗಿದೆ.
ಬಿಸಿಲಿನ ಬೇಗೆಗೆ ಹುಲಿರಾಯ ದಣಿವಾರಿಸಿಕೊಳ್ಳಲು ನೀರಿನಲ್ಲಿದ್ದಾಗ ಸಫಾರಿಗೆ ಬಂದ ಪ್ರವಾಸಿಗರಿಗೆ ಹುಲಿ ಕಾಣಿಸಿಕೊಂಡಿದೆ. ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಮೂಲದ ಆರು ಜನರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.
ಸುಮಾರು ಎರಡು ನಿಮಿಷ ೫೪ ಸೆಕೆಂಡ್ ಕಾಲ ಮೊಬೈಲ್‌ಗೆ ಪೋಸು ನೀಡಿದ ಹುಲಿ ನಂತರ ಪೊದೆಯತ್ತ ತೆರಳಿದೆ ಎಂದು ಬೀಟ್ ವಾಚರ್ ಅಶೋಕ್ ತಿಳಿಸಿದ್ದಾರೆ.
೨೦ ದಿನಗಳಲ್ಲಿ ಇದೇ ಹುಲಿ ಎರಡು ಬಾರಿ ಪ್ರವಾಸಿಗರಿಗೆ ಕಾಣಿಸಿಕೊಂಡಿರುವುದು ವಿಶೇಷ.





