ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು
ಗುಂಡ್ಲುಪೇಟೆ: ತಾಲ್ಲೂಕಿನ ಬೇರಂಬಾಡಿ ಗ್ರಾಮದ ಜಮೀನೊಂದರಲ್ಲಿ ಉಪಟಳ ನೀಡುತಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೇರಂಬಾಡಿ ಗ್ರಾಮದ ಸಚಿನ್ ಎಂಬುವವರ ಜಮೀನಿನಲ್ಲಿ ಮುಸುಕಿನ ಜೋಳ ಕಟಾವಿಗೆ ತೆರಳಿದಾಗ ಹುಲಿ ಕಾಣಿಸಿಕೊಂಡಿತ್ತು. ನಂತರ ಗಾಬರಿಗೊಂಡ ಜನರು ರೈತಸಂಘದ ಸ್ನೇಹಿತರಿಗೆ ಮಾಹಿತಿ ನೀಡಿದ್ದರು.
ಹುಲಿಯನ್ನು ಸೆರೆ ಹಿಡಿಯಲೇಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಕಾರ್ಯಾಚರಣೆ ವೇಳೆ ಹುಲಿಯು ಅರಣ್ಯ ಇಲಾಖೆ ವಾಚರ್ ಮೇಲೆ ಎರಗಿದ್ದು, ಕೈ ಕಾಲು ಕಚ್ಚಿ ಗಾಯಗೊಳಿಸಿದೆ.
ಸೆರೆಯಾದ ಹುಲಿ ಸುಮಾರು ಒಂದೂವರೆ ಎರಡು ವರ್ಷದ ಗಂಡು ಹುಲಿ ಎಂದು ತಿಳಿದುಬಂದಿದ್ದು, ಹುಲಿ ಗಾಯಗೊಂಡ ಕಾರಣ ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿದೆ ಎಂದು ಎಸಿಎಫ್ ನವೀನ್ ಕುಮಾರ್ ತಿಳಿಸಿದ್ದಾರೆ.
ಸ್ಥಳಕ್ಕೆ ಎಸಿಎಫ್ ಪ್ರಭಾಕರನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರು ಈ ಭಾಗದಲ್ಲಿ ಕಾಡು ಪ್ರಾಣಿಗಳು ಬೆಳೆನಾಶ ಮಾಡುತ್ತಿದ್ದು, ಪರಿಹಾರ ಮಾತ್ರ ಇನ್ನೂ ಬಂದಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಎಸಿಎಫ್ ಅವರು, ಬೆಳೆ ನಷ್ಟಕ್ಕೆ ಸರ್ಕಾರದ ಹಣ ಬಂದಾಗ ನೀಡುವ ಭರವಸೆ ನೀಡಿದರು.





