ಚಾಮರಾಜನಗರ: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಪತ್ನಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಕುದೇರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಬನ್ನೂರು ಗ್ರಾಮದ ರಮೇಶ್ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದು, ಪತ್ನಿ ಗೀತಾ ಹಾಗೂ ಪ್ರಿಯಕರ ಗುರುಪಾದಸ್ವಾಮಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಗೀತಾ ಜನವರಿ.21ರಂದು ಕುದೇರು ಪೊಲೀಸ್ ಠಾಣೆಗೆ ಬಂದು ತನ್ನ ಪತಿ ರಮೇಶ್ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಜನವರಿ.14ರಂದು ಮನೆಯಿಂದ ಹೊರಹೋದ ಪತಿ ಮತ್ತೆ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗೀತಾಳನ್ನು ವಿಚಾರಣೆ ಮಾಡಿ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೀತಾ ತನ್ನ ಪ್ರಿಯಕರ ಗುರುಪಾದಸ್ವಾಮಿ ಜೊತೆ ಸೇರಿ ರಮೇಶ್‌ನನ್ನು ಕೊಲೆ ಮಾಡಿ ಆ ಬಳಿಕ ಮೃತದೇಹವನ್ನು ಕಪಿಲಾ ನದಿಯಲ್ಲಿ ಬಿಸಾಡಿ ಬಂದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ.
ಕಪಿಲಾ ನದಿಯಿಂದ ಮೃತದೇಹವನ್ನು ಹೊರ ತೆಗೆದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.