Mysore
20
mist

Social Media

ಶನಿವಾರ, 24 ಜನವರಿ 2026
Light
Dark

ಅಪಘಾತಗಳ ತಡೆಗೆ ಸೂಕ್ತ ಸುರಕ್ಷತಾ ಕ್ರಮವಹಿಸಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚಾಮರಾಜನಗರ: ಜಿಲ್ಲೆಯಲ್ಲಿ ಆಗುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸೂಕ್ತವಾಗಿರುವ ಸುರಕ್ಷತಾ ಕ್ರಮಗಳಿಗೆ ಕೂಡಲೇ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಪಘಾತ ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ನಾಮಫಲಕ, ಸೂಚನಾ ಫಲಕ, ಜೀಬ್ರಾ ಕ್ರಾಸಿಂಗ್ ಇರುವ ಕೆಲವು ಕಡೆ ರಸ್ತೆ ಸರಿಪಡಿಸಿ ಮಿಡಿಯನ್‍ಗೆ ಬಣ್ಣ ಹಚ್ಚಬೇಕು. ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್ ಇರುವ ಕಡೆ ರಸ್ತೆ ಸುರಕ್ಷತೆ ಬ್ಲಿಂಕರ್ ಅಳವಡಿಸಬೇಕು ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳು ಇತರೆ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಪಾಯಿಂಟ್‍ ಗುರುತಿಸಬೇಕು. ಸಾರ್ವಜನಿಕರಿಗೆ ಸಂಚಾರ ನಿಯಮಗಳ ಜಾಗೃತಿ ಮೂಡಿಸಬೇಕು. ಅತಿವೇಗ ಸಂಚಾರ, ಹೆಲ್ಮೆಟ್ ಧರಿಸದೇ ಇರುವುದರಿಂದ ಆಗಬಹುದಾದ ಅನಾಹುತ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಹಿಟ್ ಅಂಡ್ ರನ್ ಪ್ರಕರಣಗಳನ್ನು ಇತ್ಯರ್ಥಪಡಿಸಿ ಬಾಧಿತರಿಗೆ ವಿಮೆ ಪಾವತಿಸುವ ಕಾರ್ಯ ಸಕಾಲದಲ್ಲಿ ಆಗಬೇಕು ಎಂದರು.

ಹೆದ್ದಾರಿ ರಸ್ತೆಗಳಲ್ಲಿ ಸೂಕ್ತವಿರುವ ಕಡೆ ವೈಜ್ಞಾನಿಕವಾಗಿ ಬಸ್‌ ಸ್ಟಾಪ್‌ ನಿರ್ಮಾಣಗಬೇಕು. ರಸ್ತೆ ಸುರಕ್ಷತಾ ನಿಯಮಗಳು ಕಡ್ಡಾಯವಾಗಿ ಪಾಲನೆಯಾಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಎಲ್ಲೆಲ್ಲಿ ಸುರಕ್ಷತಾ, ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂಬ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳು ಹಾಗೂ ವಾಹನಗಳಿಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಸ್ಪಷ್ಟವಾಗಿ ಕಾಣುವಂತೆ ಹಾಕಬೇಕಿದೆ. ಅಪಘಾತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ರಸ್ತೆ ನಿರ್ಮಾಣ ಮಾಡುವ ಪ್ರಾಧಿಕಾರ ಸಂಸ್ಥೆಗಳು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್‌ ಗುಪ್ತಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ಮಹೇಶ್‌ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!