ಹನೂರು: ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್ 24 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಸ್ಥಳವನ್ನು ದೀಪದ ಗಿರಿ ವಡ್ಡುವಿನ 108 ಅಡಿ ಪ್ರತಿಮೆ ಆವರಣದ ಬದಲಾಗಿ ನೂತನ 376 ವಸತಿಗೃಹದ ಮುಂಭಾಗದ ಖಾಲಿ ನಿವೇಶನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದ ಸಚಿವ ಸಂಪುಟ ಸಭೆ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ಆವರಣದ ದೀಪದಗಿರಿ ಒಡ್ಡಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ತಜ್ಞರ ಅಭಿಪ್ರಾಯದಂತೆ ಸ್ಥಳ ಬದಲಾಯಿಸಲಾಗಿದೆ. ದೀಪದಗಿರಿ ಒಡ್ಡು ಎತ್ತರದ ಪ್ರದೇಶದಲ್ಲಿ ಇದ್ದು, ಬಿರುಗಾಳಿ ಬೀಸುವುದರಿಂದ ಸಭೆ ನಡೆಸಲು ತೊಂದರೆ ಆಗಬಹುದು, ಇದಲ್ಲದೆ ಮಳೆ ಬಿಡುವ ಸಂಭವ ಇರುವುದರಿಂದ ಸ್ಥಳ ಬದಲಾವಣೆ ಮಾಡಲಾಗಿದೆ.ಇದಲ್ಲದೆ ಸಭೆಗೆ ನಿರ್ಮಾಣ ಮಾಡುವ ಜರ್ಮನ್ ಟೆಂಟ್ ಗಳು ಸಹ ಸಮರ್ಪಕವಾಗಿ ಹಾಕಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡು ಬದಲಾವಣೆ ಮಾಡಲಾಗಿದೆ ಎಂದರು.
ಇನ್ನು 376 ವಸತಿಗೃಹಗಳ ಖಾಲಿ ನಿವೇಶನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು ಇದೀಗ ವಾಹನದ ನಿಲುಗಡೆ ಸ್ಥಳವನ್ನು ಬದಲಾಯಿಸಲಾಗುವುದು ಎಂದರು.
ಈ ವೇಳೆ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಧರ್ಮೇಂದ್ರ ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ ಮಹದೇವಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.





