ಗುಂಡ್ಲುಪೇಟೆ: ರಾಷ್ಟ್ರೀಯ ಉದ್ಯಾನವನ ಬಂಡೀಪುರದಲ್ಲಿ ಏಕಾಏಕಿ ರೊಚ್ಚಿಗೆದ್ದ ಸಾಕಾನೆ ರೋಹಿತ್ ಮಾವುತನ ಮೇಲೆ ದಾಳಿ ನಡೆಸಿದ್ದು, ರಸ್ತೆಯಲ್ಲೇ ರಂಪಾಟ ನಡೆಸಿದ ಘಟನೆ ನಡೆದಿದೆ.
ರಾಂಪುರ ಆನೆ ಶಿಬಿರದಿಂದ ವಿಶೇಷ ತರಬೇತಿಗಾಗಿ ರೋಹಿತ್ ಆನೆಯನ್ನು ಬಂಡೀಪುರ ಅರಣ್ಯಕ್ಕೆ ಕರೆತರಲಾಗಿತ್ತು. ಬದಲಾದ ಪರಿಸರದ ಜೊತೆಗೆ ರೋಹಿತ್ ಆನೆಗೆ ಮದವೇರಿದ್ದು, ಮಾವುತ ವೆಂಕಟೇಶ್ ಮೇಲೆ ದಾಳಿ ನಡೆಸಿದೆ.
ಆನೆ ದಾಳಿಯಿಂದ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಮಾವುತನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ರೋಹಿತ್ ಆನೆಯು ಬಂಡೀಪುರ ರಸ್ತೆಯಲ್ಲಿ ಚಲಿಸುವ ವಾಹನಗಳ ಮೇಲೂ ಏಕಾಏಕಿ ದಾಳಿ ನಡೆಸಲು ಮುಂದಾಗಿದೆ. ಈ ವೇಳೆ ಕೆಲ ದ್ವಿಚಕ್ರ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಆನೆ ದಾಳಿಯಿಂದ ಗಂಟೆಗಟ್ಟಲೇ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಆನೆ ದಿಕ್ಕಾಪಾಲಾಗಿ ನುಗ್ಗಿದ ಪರಿಣಾಮ ವಾಹನ ಸವಾರರು ತೀವ್ರ ಭಯಭೀತರಾಗಿದ್ದರು.