ಗುಂಡ್ಲುಪೇಟೆ: ತಾಲೂಕಿನಲ್ಲಿ ಇಂದು ( ಜೂನ್ 6 ) ಸಂಜೆ ಸುರಿದ ಭಾರೀ ಮಳೆಗೆ ಕೆಲವೆಡೆ ರಸ್ತೆ, ಜಮೀನು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಣ್ಣೂರುಕೇರಿ ಗ್ರಾಮದ ಸೇತುವೆ ಮೇಲೆ ನೀರು ಹರಿದ ಪರಿಣಾಮ ವಡ್ಡರ ಹೊಸಹಳ್ಳಿಗೆ ಸಂಪರ್ಕ ಕಷ್ಟವಾಗಿದೆ. ಮರಳಾಪುರದಲ್ಲಿ ಭಾರೀ ಮಳೆಯಿಂದಾಗಿ ಜಮೀನಿಗೆ ನೀರು ನುಗ್ಗಿದ್ದು, ಈ ದೃಶ್ಯಗಳನ್ನು ನೆಟ್ಟಿಗರೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಹಾಲಹಳ್ಳಿ ಹಾಗೂ ತೊಂಡವಾಡಿ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದ್ದು, ಸಂಚಾರ ಬಂದಾಗಿದೆ. ಮೈಸೂರು – ಊಟಿ ರಸ್ತೆಯಲ್ಲಿರುವ ಹಿರಿಕಾಟಿ ಗೇಟ್‌ನಲ್ಲಿಯೂ ಸಹ ನೀರು ಹರಿದಿದ್ದು, ವಾಹನ ಸಂಚಾರ ತೀರ ಕಷ್ಟಸಾಧ್ಯವಾಗಿದೆ.
ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ಭಾರೀ ಮಳೆಗೆ ದೇವರಕೆರೆ ಹಾಗೂ ಅಗಸನಕಟ್ಟೆ ತುಂಬಿ ಏರಿ ಮೇಲೆ ನೀರು ಹರಿದಿದ್ದು, ಕೋಡಿ ಸರಿ ಇಲ್ಲದ ಕಾರಣ ಕೆರೆ ಒಡೆಯುವ ಭೀತಿ ಎದುರಾಗಿದೆ.