ಹನೂರು: ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಜಮ್ಮ ಮತ್ತು ಉಪಾಧ್ಯಕ್ಷರಾಗಿ ಲಲಿತಾ ಆಯ್ಕೆಯಾದರು.
ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೂ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ 14 ಸದಸ್ಯರ ಸಂಖ್ಯಾಬಲವಿದ್ದು ಬಿಜೆಪಿ ಬೆಂಬಲಿತ ಏಳು ಕಾಂಗ್ರೆಸ್ ಬೆಂಬಲಿತ ಏಳು ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರು ಅವಿರೋಧ ಆಯ್ಕೆ ಮಾಡಲಾಯಿತು. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಲಲಿತಾ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಮಹಾದೇವಮ್ಮ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಲಿತಾರವರಿಗೆ 9 ಮತಗಳು, ಮಹದೇವಮ್ಮ ರವರಿಗೆ 5 ಮತಗಳು ಲಭಿಸಿದ್ದವು. ಅಂತಿಮವಾಗಿ ಅಧ್ಯಕ್ಷರಾಗಿ ರಾಜಮ್ಮ ಉಪಾಧ್ಯಕ್ಷರಾಗಿ ಲಲಿತಾ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಲೋಕೋಪಯೋಗಿ ಇಲಾಖೆಯ ಸುರೇಂದ್ರ ಘೋಷಣೆ ಮಾಡಿದರು. ಸಹ ಚುನಾವಣಾಧಿಕಾರಿಯಾಗಿ ಪಿಡಿಒ ರಂಗರಾಜು ಕರ್ತವ್ಯ ನಿರ್ವಹಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಿವು ಮಾತನಾಡಿ ಕಳೆದ ೧೫ ವರ್ಷಗಳ ಅವಧಿಯಲ್ಲಿ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷ ಸಾಧ್ಯವಾಗಿರಲಿಲ್ಲ ಆದರೆ ಈ ಬಾರಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ನೀಲಮ್ಮ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಸಂತಸವಾಗಿದೆ. ಮುಂದಿನ ದಿನಗಳಲ್ಲಿ ಮಾಜಿ ಶಾಸಕ ಆರ್ ನರೇಂದ್ರ ಹಾಗೂ ಎಲ್ಲಾ ಸರ್ವ ಸದಸ್ಯರ ಸಹಕಾರ ಪಡೆದು ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದರು.
ಪಟಾಕಿ ಸಿಡಿಸಿ ಸಿಹಿ ಹಂಚಿದ ಕಾರ್ಯಕರ್ತರು: ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿಗೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ನೀಲಮ್ಮ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡುತ್ತಿದ್ದಂತೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಗ್ರಾಮ ಪಂಚಾಯತಿ ಕಚೇರಿ ಮುಂಭಾಗ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿದರು.
ಸೂಕ್ತ ಪೊಲೀಸ್ ಬಂದೋಬಸ್ತ್: ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ಸೂಕ್ಷ್ಮ ಗ್ರಾಮ ಪಂಚಾಯಿತಿ ಆಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಮಪುರ ಪೊಲೀಸರು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ದಂಟಳ್ಳಿ ಶಿವು, ಸರ್ದಾರ್, ರಾಜಾರಾಮ್, ಮಹದೇವಮ್ಮ, ಜಯಲಕ್ಷ್ಮಿ, ಬಸವರಾಜು ಮುಖಂಡರಾದ ಬಸವರಾಜು, ದೇವು ಸೇರಿದಂತೆ ಇನ್ನಿತರರು ಹಾಜರಿದ್ದರು.