ಹನೂರು: ತಮಿಳುನಾಡು ಹಸುಗಳನ್ನು ಹೊರತುಪಡಿಸಿ ನಮ್ಮ ಸ್ಥಳೀಯ ರೈತರ ಕುರಿ, ಮೇಕೆ, ಹಸು ಸೇರಿದಂತೆ ಇನ್ನಿತರ ಜಾನುವಾರುಗಳನ್ನು ಅರಣ್ಯ ವ್ಯಾಪ್ತಿಯಲ್ಲಿ ಮೇಯಿಸಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ನಿಟ್ಟಿನಲ್ಲಿ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಜಿ ಶಾಸಕ ಆರ್.ನರೇಂದ್ರ ಸ್ಪಷ್ಟಪಡಿಸಿದ್ದಾರೆ.
ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಐದು ಹುಲಿಗಳು ಮೃತಪಟ್ಟ ನಂತರ ಹಲವಾರು ಊಹಾಪೋಹ ಸುದ್ದಿಗಳು ಹರಿದಾಡುತ್ತಿವೆ.
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಹೊರ ರಾಜ್ಯದ ಹಸುಗಳನ್ನು ಕರೆತಂದು ನಮ್ಮ ಅರಣ್ಯ ಪ್ರದೇಶದಲ್ಲಿ ಮೇಯಿಸಲು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ದೂರವಾಣಿ ಮುಖಾಂತರ ಸಚಿವರ ಜೊತೆ ಮಾತನಾಡಿ ಚರ್ಚೆ ನಡೆಸಿದ ವೇಳೆ ಅವರು ಸ್ಥಳೀಯ ರೈತರುಗಳಿಗೆ ಯಾವುದೇ ತೊಂದರೆ ಕೊಡುವ ಉದ್ದೇಶವಿಲ್ಲ, ಹಿಂದೆ ಅರಣ್ಯ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಮೇಯಿಸಿಕೊಂಡು ಸಂಜೆಯಾಗುತ್ತಿದ್ದಂತೆ ವಾಪಸ್ ಕರೆತಂದು ತಮ್ಮ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಅಥವಾ ಬಯಲು ಪ್ರದೇಶದಲ್ಲಿ ಬಿಡುತ್ತಿದ್ದರು. ಅದೇ ಮಾದರಿಯಲ್ಲಿ ಆದೇಶ ಮಾಡಲಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ ಆದ್ದರಿಂದ ರೈತರು ಅರಣ್ಯದಲ್ಲಿ ಮೇವು ಮೇಯಿಸುವ ವಿಚಾರವಾಗಿ ಯಾವುದೇ ಅನಗತ್ಯ ಗೊಂದಲಗಳಿಗೆ ಯಾವುದೇ ಪ್ರಾತಿನಿದ್ಯ ನೀಡಬಾರದು ಎಂದು ತಿಳಿಸಿದರು.
ನಮ್ಮ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಶೇ.48 ರಷ್ಟು ಭೂ ಪ್ರದೇಶವಿದ್ದು ಶೇಕಡಾ.52ರಷ್ಟು ದಟ್ಟ ಅರಣ್ಯದಿಂದ ಕೂಡಿದೆ. ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ವಾಸಿಸುವ ರೈತರು ಅರಣ್ಯವನ್ನು ನಂಬಿಕೊಂಡು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಹಸು, ಕುರಿ, ಮೇಕೆ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರೈತರ ಪರವಾಗಿದೆ ಎಂದರು.





