ಚಾಮರಾಜನಗರ : ತಾಲ್ಲೂಕಿನ ನಂಜೇದೇವಪುರ ಬಳಿ ನಾಲ್ಕು ಮರಿಗಳ ಜೊತೆ ತಾಯಿ ಹುಲಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗಾಗಿ ಕೂಂಬಿಂಗ್ ನಡೆಸಲು ಕೊಡಗಿನ ದುಬಾರೆ ಶಿಬಿರದಿಂದ ಕರೆತರಲಾಗಿದ್ದ 5 ಸಾಕಾನೆಗಳನ್ನು ಗುರುವಾರ ಶಿಬಿರಕ್ಕೆ ವಾಪಸ್ ಕಳುಹಿಸಲಾಯಿತು.
ಗ್ರಾಮದ ಆನೆಮಡುವಿನ ಕೆರೆಯ 5 ಕಿಮೀ ವ್ಯಾಪ್ತಿಯಲ್ಲಿ 5 ಹುಲಿಗಳ ಚಲನವಲನ ನಾಲ್ಕೈದು ದಿನಗಳಿಂದ ಕಂಡು ಬಾರದ ಕಾರಣ ಆನೆಗಳನ್ನು ಶಿಬಿರಕ್ಕೆ ಕಳುಹಿಸಿದ್ದಾರೆ. ಗ್ರಾಮದ ಕುಮಾರಸ್ವಾಮಿ ಎಂಬವರ ತೋಟದ ಕಡೆಯಿಂದ ತಮ್ಮಡಹಳ್ಳಿಗೆ ಹೋಗುವ ದಾರಿಯಲ್ಲಿ 4 ಮರಿಗಳ ಜೊತೆ ತಾಯಿ ಹುಲಿ ಇರುವ ದೃಶ್ಯಸಿಸಿ ಕ್ಯಾಮೆರಾ ದಲ್ಲಿ ಡಿ.19ರಂದು ಸೆರೆಯಾಗಿತ್ತು. ಇವುಗಳ ಸೆರೆ ಕಾರ್ಯಾಚರಣೆಗೆ ಮೊದಲಿಗೆ ಎರಡು, ನಂತರ ಮೂರು ಆನೆಗಳನ್ನು ಕರೆತಂದು ವಾರದ ಮೇಲಾಗಿತ್ತು. ಗುರುವಾರ ಬೆಳಿಗ್ಗೆ ಮಾವುತರು ,ಕಾವಾಡಿಗರು ಆನೆಗಳೊಂದಿಗೆ ಶಿಬಿರಕ್ಕೆ ಹಿಂದಿರುಗಿದರು.
ಕಾರ್ಯಾಚರಣೆ ಸ್ಥಳದಲ್ಲಿ ವಾಕ್ ಥ್ರೋ ಕೇಜ್, ತುಮಕೂರು ಬೋನು ಮತ್ತು ಸಾಮಾನ್ಯ ಬೋನುಗಳು ಹಾಗೆಯೇ ಇವೆ. ಏನಾದರೂ ಈ ಭಾಗದಲ್ಲಿ ಮತ್ತೆ ಐದು ಹುಲಿಗಳ ಚಲನವಲನ ಕಂಡುಬಂದರೆ ಬಂಡೀಪುರ ಅಥವಾ ನಾಗರಹೊಳೆಯ ತಿಥಿ ಮತಿ ಶಿಬಿರದಿಂದ ಸಾಕಾನೆಗಳನ್ನು ಬರಮಾಡಿಕೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.




