Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸಾಲು ಸಾಲು ರಜೆ; ಪಿಜಿ ಪಾಳ್ಯ ಸಫಾರಿ ಕೇಂದ್ರದತ್ತ ಪ್ರಾಣಿಪ್ರಿಯರ ಹೆಜ್ಜೆ

ಹನೂರು: ಮೂರು ದಿನಗಳ ಕಾಲ ಸಾಲು ಸಾಲು ಸರ್ಕಾರಿ ರಜೆಯಿದ್ದ ಹಿನ್ನೆಲೆ ಹನೂರು ತಾಲೂಕಿನ ಪಿ ಲೊಕ್ಕನಹಳ್ಳಿ ಸಫಾರಿ ಕೇಂದ್ರಕ್ಕೆ 70ಕ್ಕೂ ಹೆಚ್ಚು ಜನರು ಭೇಟಿ ನೀಡಿ ಪ್ರಕೃತಿಯ ಸೊಬಗು ಹಾಗೂ ವನ್ಯ ಪ್ರಾಣಿಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಎರಡನೇ ಶನಿವಾರ ಭಾನುವಾರ ಹಾಗೂ ಈದ್ ಮಿಲಾದ್ ಪ್ರಯುಕ್ತ ಸೋಮವಾರ ಸರ್ಕಾರಿ ರಜೆ ಇದ್ದ ಹಿನ್ನೆಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಗಳ ವ್ಯಾಪ್ತಿಯ ಲೊಕ್ಕನಹಳ್ಳಿ ಸಫಾರಿ ಕೇಂದ್ರಕ್ಕೆ 70 ಜನರು ಭೇಟಿ ನೀಡಿದ್ದು 25 ಸಾವಿರಕ್ಕೂ ಹೆಚ್ಚು ಆದಾಯ ಬಂದಿದೆ.

ಮೂರು ದಿನಗಳ ಅವಧಿಯಲ್ಲಿ ಬಂದಿದ್ದ ಪ್ರವಾಸಿಗರಿಗೆ ಆನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ವಿವಿಧ ಪ್ರಭೇದದ ಪಕ್ಷಿಗಳು ಕಂಡಿವೆ.

ಸಫಾರಿ ಕೇಂದ್ರದ ಚುಜ್ಜಲು ಕೆರೆ ಸಮೀಪ ಎರಡು ಮರಿಗಳ ಜೊತೆ ತಾಯಿ ಆನೆ ನೀರು ಕುಡಿಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸರೆಯಾಗಿದೆ. ವಡವಾರದ ಕೆರೆ ಸಮೀಪ ಕಾಡೆಮ್ಮೆ ತನ್ನ ಮರಿಗಳ ಜೊತೆ ಮೇವು ತಿನ್ನುತ್ತಿರುವುದು, ಶನಿವಾರ ಮುತ್ತನಹೊಲದ ಕೆರೆ ಸಮೀಪ ಒಂಟಿ ಸಲಗ ರಸ್ತೆ ಬದಿಯಲ್ಲಿ ನಿಂತಿರುವ ದೃಶ್ಯ ಸೆರೆಯಾಗಿದೆ.

ಇನ್ನು ಮೂರು ದಿನಗಳ ಅವಧಿಯಲ್ಲಿ ಬಂದಿದ್ದಂತಹ ಪ್ರವಾಸಿಗರಿಗೆ ವನ್ಯ ಪ್ರಾಣಿಗಳು ಸ್ವಚ್ಛಂದವಾಗಿ ಓಡಾಡುತ್ತಿರುವ ದೃಶ್ಯ ಕಾಣಸಿಕ್ಕಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ವ್ಯಾಪ್ತಿಯ ಮಲೆ ಮಹದೇಶ್ವರ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಡಿಸೆಂಬರ್‌ನಲ್ಲಿ ಪ್ರಾರಂಭವಾದ ಲೊಕ್ಕನಹಳ್ಳಿ ಸಫಾರಿ ಕೇಂದ್ರಕ್ಕೆ ಉತ್ತಮವಾದ ಸ್ಪಂದನೆ ಸಿಗುತ್ತಿದೆ. ಬರುವಂತಹ ಪ್ರವಾಸಿಗರಿಗೆ ಹೋಟೆಲ್, ವಾಸ್ತವ್ಯಕ್ಕೆ ಕೊಠಡಿ, ಶೌಚಾಲಯ, ಮಾಹಿತಿ ಕೇಂದ್ರ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳು ದೊರಕಿಸಿ ಕೊಟ್ಟರೆ ಇನ್ನಷ್ಟು ಅಭಿವೃದ್ಧಿಯಾಗಲಿದೆ.

ಹನೂರು ತಾಲೂಕು ವ್ಯಾಪ್ತಿಯಲ್ಲಿ ಮಲೆ ಮಹದೇಶ್ವರ ಬೆಟ್ಟ, ಹೊಗೇನಕಲ್ ಫಾಲ್ಸ್ , ಲೊಕ್ಕನಹಳ್ಳಿ ಸಫಾರಿ ಕೇಂದ್ರ, ಗುಂಡಾಲ್ ಜಲಾಶಯ, ಉಡುತೊರೆ ಜಲಾಶಯ, ಕೌಳಿ ಹಳ್ಳ ಜಲಾಶಯ, ಟಿಬೆಟಿಯನ್ ಕ್ಯಾಂಪ್, ಟಾಟಾ ಎಸ್ಟೇಟ್ ಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿದರೆ ಉತ್ತಮ ಪ್ರವಾಸಿ ತಾಣವಾಗಲಿದ್ದು, ಇಲಾಖೆಗೆ ಉತ್ತಮ ಆದಾಯವು ಸಹ ಬರಲಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ.

Tags: