ಹನೂರು: ತಾಲೂಕಿನ ಪಿ. ಜಿ ಪಾಳ್ಯ ಸಫಾರಿಗೆ ಎರಡನೇ ಹಂತದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಡುತೊರೆಹಳ್ಳ ಜಲಾಶಯದ ಮಾರ್ಗವಾಗಿ ಸಫಾರಿ ಪ್ರಾರಂಭ ಮಾಡಲಾಗಿದೆ ಎಂದು ಮಲೆ ಮಹದೇಶ್ವರ ವನ್ಯ ಧಾಮದ ಎಸಿಎಫ್ ಶಿವರಾಮು ತಿಳಿಸಿದರು.
ತಾಲೂಕಿನ ಅಜ್ಜೀಪುರ ಗ್ರಾಮದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಮುಂಭಾಗದಲ್ಲಿ ಸಫಾರಿಗೆ ತೆರಳುವ ಪ್ರವಾಸಿಗರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಪ್ರಪ್ರಥಮ ಬಾರಿಗೆ ಕಳೆದ 2023ರ ಡಿಸೆಂಬರ್ 2 ರಂದು ಶಾಸಕರಾದ ಮಂಜುನಾಥ್ ರವರು ಚಾಲನೆ ನೀಡಿದ್ದರು. ಪ್ರಾರಂಭದಲ್ಲಿ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಸಫಾರಿಗೆ ಪ್ರವಾಸಿಗರನ್ನು ಕರೆದೊಯ್ಯಲು ಎರಡು ವಾಹನಗಳನ್ನು ಬಿಡಲಾಗಿತ್ತು. ಬೇಡಿಕೆ ಹೆಚ್ಚಾದ ಹಿನ್ನೆಲೆ ಕಳೆದ ಒಂದು ತಿಂಗಳಿನಿಂದ ಹೆಚ್ಚುವರಿಯ ಇನ್ನೊಂದು ವಾಹನ ಸೇರಿ ಮೂರು ಪ್ರವಾಸಿ ವಾಹನಗಳು ಪ್ರವಾಸಿಗರನ್ನು ಕರೆದೊಯ್ಯುತ್ತಿದೆ ಎಂದು ತಿಳಿಸಿದರು.
ಸಫಾರಿ ಕೇಂದ್ರಕ್ಕೆ ಬರುವ ವನ್ಯಜೀವಿ ಪ್ರಿಯರನ್ನು 18 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಿ ವಾಪಸ್ ಬರಲಾಗುತ್ತಿದೆ. ಇದುವರೆಗೂ ಸಫಾರಿಗೆ ಬಂದಂತಹ ಪ್ರವಾಸಿಗರಿಗೆ ಆನೆ, ಹುಲಿ, ಚಿರತೆ ,ಜಿಂಕೆ, ಕಡವೆ, ಕಾಡಮ್ಮೆ, ಕರಡಿ, ತೋಳ, ನರಿ ಸೇರಿದಂತೆ ಇನ್ನಿತರ ಪ್ರಾಣಿಗಳು ಕಂಡು ಬಂದಿದೆ. ಇದುವರೆಗೂ ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರವಾಸಗಳು 400ಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳ ಭೇಟಿ ನೀಡಿ ಪ್ರಕೃತಿಯ ಸೊಬಗು ಸವಿದಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಇವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಬರುವ ಮಾರ್ಗದಲ್ಲಿಯೇ ಸಫಾರಿ ಪ್ರಾರಂಭ ಮಾಡಿದರೆ ಇನ್ನಷ್ಟು ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುವುದರಿಂದ, ಅನುಮತಿಗಾಗಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು ಇದೀಗ ಅನುಮತಿ ಸಿಕ್ಕಿರುವುದರಿಂದ ಉಡುತೊರೆ ಹಳ್ಳ ಜಲಾಶಯದ ಮೂಲಕ ಸಫಾರಿ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ ಇದನ್ನು ವನ್ಯಜೀವಿ ಪ್ರಿಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಫಾರಿ ಕೇಂದ್ರದ ವಿಳಾಸ: ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾವೇರಿ ನೀರಾವರಿ ನಿಗಮ ನಿಯಮಿತ, ಕಬಿನಿ ವಿಭಾಗ ನಂ 4 ರವರ ಕಚೇರಿ ಮುಂಭಾಗ ಅಜ್ಜೀಪುರ ಗ್ರಾಮ
ಸಫಾರಿ ಕೇಂದ್ರದ ಸಮಯ:; ಪ್ರತಿದಿನ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಹಾಗೂ ಸಂಜೆ ಮೂರು ರಿಂದ ಆರು ಗಂಟೆಯವರೆಗೆ ಸಫಾರಿ ಇರಲಿದ್ದು ಸಫಾರಿ ಶುಲ್ಕ ವಯಸ್ಕರಿಗೆ 400 ಮಕ್ಕಳಿಗೆ ಇನ್ನೂರು ರೂಪಾಯಿ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9481995505,9481995515,9481995536 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಲಾಗಿದೆ. ಇ ಮೇಲ್ ವಿಳಾಸ rfohanur123@gmail.com ಸಂಪರ್ಕ ಮಾಡಬಹುದಾಗಿದೆ.
ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಿಂದ ಬರುವಂತಹ ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಮಲೆ ಮಹದೇಶ್ವರ ಬೆಟ್ಟದಿಂದ ಹೊರಟು ಕೌದಳ್ಳಿ ತಲುಪಿ ನಂತರ ರಾಮಾಪುರ ಮಾರ್ಗವಾಗಿ ಅಜ್ಜೀಪುರಕ್ಕೆ ತಲುಪಿ ನಂತರ ಸಫಾರಿ ಕೇಂದ್ರಕ್ಕೆ ತೆರಳ ಬೇಕಿದೆ.
ಹನೂರಿನಿಂದ ಅಜ್ಜೀಪುರ ಸಫಾರಿ ಕೇಂದ್ರಕ್ಕೆ 8 ಕಿಲೋ ಮೀಟರ್ ಅಂತರವಿದೆ.
ಕೌದಳ್ಳಿ ಗ್ರಾಮದಿಂದ ರಾಮಪುರ ಮಾರ್ಗವಾಗಿ .
ತಮಿಳುನಾಡಿನ ಹಂದಿಯೂರು ಮಾರ್ಗವಾಗಿ ಅಜ್ಜೀಪುರ ಸಫಾರಿ ಕೇಂದ್ರಕ್ಕೆ ಸುಮಾರು 55 ಕಿ.ಮೀ ಅಂತರವಿದೆ.
ಒಟ್ಟಾರೆ ಅಜ್ಜೀಪುರ ಗ್ರಾಮದಿಂದ ಪಿಜಿ ಪಾಳ್ಯ ಸಫಾರಿ ಕೇಂದ್ರಕ್ಕೆ ಚಾಲನೆ ನೀಡಿರುವುದು ಹಲವು ವನ್ಯ ಪ್ರಿಯರಿಗೆ ಸಂತಸವನ್ನುಂಟು ಮಾಡಿದೆ.
ಗುರುವಾರಕ್ಕೆ ಈಗಾಗಲೇ ಬುಕಿಂಗ್: ಉಡುತೊರೆ ಹಳ್ಳ ಜಲಾಶಯ ಮಾರ್ಗವಾಗಿ ಎರಡನೇ ಹಂತದಲ್ಲಿ ಸಫಾರಿ ಕೇಂದ್ರಕ್ಕೆ ಚಾಲನೆ ನೀಡಲಾಗಿದ್ದು, ಎರಡನೇ ದಿನವಾದ ಗುರುವಾರದಂದು ಸುಮಾರು ಆರು ಜನ ಪ್ರವಾಸಿಗರು ಸಫಾರಿಗೆ ತೆರಳಲು ಈಗಾಗಲೇ ಆನ್ಲೈನ್ ನಲ್ಲಿ ಬುಕಿಂಗ್ ಮಾಡಿಕೊಂಡಿದ್ದಾರೆ. ಮೊದಲ ದಿನವೇ ಮೂವರು ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಭೇಟಿ ನೀಡಿದ್ದು ವಿಶೇಷವಾಗಿತ್ತು.
ಎರಡನೇ ಹಂತದ ಸಫಾರಿ ಚಾಲನೆ ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಬಫರ್ ವಲಯದ ಆರ್ ಎಫ್ ಒ ಪ್ರವೀಣ್ ಹಾಗೂ ಇನ್ನಿತರರು ಹಾಜರಿದ್ದರು.