Mysore
27
overcast clouds

Social Media

ಸೋಮವಾರ, 02 ನವೆಂಬರ್ 2026
Light
Dark

ಮಲೆ ಮಹದೇಶ್ವರ ಬೆಟ್ಟದಲ್ಲಿ ನವೆಂಬರ್.6ರಿಂದ ಮಾದಪ್ಪನ ದೀಪಾವಳಿ ಜಾತ್ರಾ ಮಹೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಲಕ್ಷಾಂತರ ಭಕ್ತರ ಆರಾಧ್ಯ ದೈವವಾದ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಪವಿತ್ರ ತಪೋಭೂಮಿಯಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ದೀಪಾವಳಿ ಜಾತ್ರಾ ಮಹೋತ್ಸವವು ನವೆಂಬರ್ 6ರಿಂದ 10ರವರೆಗೆ ಐದು ದಿನಗಳ ಕಾಲ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಸಡಗರ ಸಂಭ್ರಮದಿಂದ ಜರುಗಲಿದೆ.

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಧಾರ್ಮಿಕ ಪರಂಪರೆ, ಸಂಪ್ರದಾಯ ಮತ್ತು ಆಚರಣೆಗಳ ಪ್ರತೀಕವಾಗಿರುವ ಈ ಜಾತ್ರಾ ಮಹೋತ್ಸವವು ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಸಾವಿರಾರು ಭಕ್ತರ ಪಾಲಿಗೆ ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಶ್ರೀ ಸಾಲೂರು ಬೃಹನ್ಮಠದ ಮಠಾಧ್ಯಕ್ಷರಾದ ಪೂಜ್ಯ ವಿದ್ವಾನ್ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರ ದಿವ್ಯ ನೇತೃತ್ವ ಮತ್ತು ಸಾನ್ನಿಧ್ಯದಲ್ಲಿ ಜಾತ್ರೆಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪ್ರದಾಯಬದ್ಧವಾಗಿ ನೆರವೇರಲಿವೆ.

ಜಾತ್ರಾ ಮಹೋತ್ಸವದ ಮೊದಲ ದಿನವಾದ ನವೆಂಬರ್ 6ರಂದು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಧಿವತ್ತಾಗಿ ಚಾಲನೆ ದೊರೆಯಲಿದೆ. ಶ್ರೀ ಸ್ವಾಮಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ಧಾರ್ಮಿಕ ಉತ್ಸವಗಳನ್ನು ನೆರವೇರಿಸುವ ಮೂಲಕ ಐದು ದಿನಗಳ ಸಂಭ್ರಮಕ್ಕೆ ತೆರೆ ಎಳೆಯಲಾಗುವುದು. ಎರಡನೇ ದಿನವಾದ ನವೆಂಬರ್ 7ರಂದು ಎಣ್ಣೆಮಜ್ಜನ ವಿಶೇಷ ಪೂಜೆಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗುವುದು. ಈ ಪೂಜೆಯು ಜಾತ್ರೆಯ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ.

ನವೆಂಬರ್.8ರಂದು ನರಕ ಚತುರ್ದಶಿಯ ಪವಿತ್ರ ಸಂದರ್ಭದಲ್ಲಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಸೇವೆಗಳನ್ನು ಸಲ್ಲಿಸಲಾಗುವುದು. ದೀಪಾವಳಿ ಹಬ್ಬದ ಧಾರ್ಮಿಕ ಮಹತ್ವವನ್ನು ಸಾರುವ ಈ ದಿನದಂದು ಭಕ್ತರು ಶ್ರೀ ಸ್ವಾಮಿಯ ದರ್ಶನ ಪಡೆದು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲಿದ್ದಾರೆ.

ದೀಪಾವಳಿ ಜಾತ್ರೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಹಾಲರುವೆ ಉತ್ಸವವು ನವೆಂಬರ್ 9ರಂದು ದೀಪಾವಳಿ ಅಮಾವಾಸ್ಯೆಯಂದು ನಡೆಯಲಿದೆ. ಅಂದು ಬೆಳಿಗ್ಗೆ 9.30ರ ನಂತರ ಪೂಜ್ಯ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಲರುವೆ ಉತ್ಸವವನ್ನು ನೆರವೇರಿಸಲಾಗುವುದು. ಇದು ಮಹದೇಶ್ವರ ಸನ್ನಿಧಾನದ ಭಕ್ತಿ ಪರಂಪರೆಯ ವಿಶೇಷ ಆಚರಣೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಐದು ದಿನಗಳ ಜಾತ್ರೆಯ ಅತ್ಯಂತ ಪ್ರಮುಖ ಮತ್ತು ಆಕರ್ಷಣೀಯ ಕಾರ್ಯಕ್ರಮವಾದ ಮಹಾರಥೋತ್ಸವವು ನವೆಂಬರ್ 10ರಂದು ಮಂಗಳವಾರ ಬೆಳಿಗ್ಗೆ 7.30ರಿಂದ 8.40ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ವಿಶೇಷ ಪೂಜಾ ಕೈಂಕರ್ಯಗಳ ನಂತರ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಹಾರಥದಲ್ಲಿ ಪ್ರತಿಷ್ಠಾಪಿಸಿ ಸಂಪ್ರದಾಯದಂತೆ ರಥೋತ್ಸವ ನೆರವೇರಿಸಲಾಗುವುದು. ಈ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಜಿಲ್ಲೆಗಳು ಮತ್ತು ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ರಥೋತ್ಸವದ ನಂತರ ಗುರುಬ್ರಹ್ಮೋತ್ಸವ, ಅನ್ನಬ್ರಹ್ಮೋತ್ಸವ ಹಾಗೂ ರಾತ್ರಿ ಮಹಾ ನೈವೇದ್ಯದ ನಂತರ ತೆಪ್ಪೋತ್ಸವದೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೊಳ್ಳಲಿದೆ.

ಇದೇ ವೇಳೆ, ಮಹಾರಥೋತ್ಸವದ ಪ್ರಮುಖ ಆಕರ್ಷಣೆಯಾದ ಮಹಾರಥದ ನಿರ್ಮಾಣ ಕಾರ್ಯಕ್ಕೆ ಸೋಮವಾರ ನವೆಂಬರ್.2ರ ಮುಂಜಾನೆ ಶುಭ ಮುಹೂರ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ.

ಶ್ರೀ ಸಾಲೂರು ಬೃಹನ್ಮಠದ ಮಠಾಧ್ಯಕ್ಷರಾದ ಪೂಜ್ಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ರಥೋತ್ಸವವು ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನೆರವೇರಲಿ ಮತ್ತು ನಾಡಿನ ಸಮಸ್ತ ಭಕ್ತರಿಗೆ ಶ್ರೀ ಸ್ವಾಮಿಯ ಅನುಗ್ರಹ ಲಭಿಸಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಸರದಿ ಅರ್ಚಕರು ಹಾಗೂ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ ಅವರು ಉಪಸ್ಥಿತರಿದ್ದರು.

Tags:
error: Content is protected !!