Mysore
26
thunderstorm with rain

Social Media

ಬುಧವಾರ, 18 ಮಾರ್ಚ್ 2026
Light
Dark

ಮ.ಬೆಟ್ಟ | ಯುಗಾದಿ ಜಾತ್ರೆಗೆ ಪಾದಯಾತ್ರೆಯಲ್ಲಿ ಬರುತ್ತಿರುವ ಭಕ್ತರು

ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ ನೆರೆಯ ತಮಿಳುನಾಡು ಭಾಗದಿಂದ ಸಾವಿರಾರು ಪಾದಯಾತ್ರಿಕರು ಮಾದಪ್ಪನ ದರ್ಶನಕ್ಕಾಗಿ ಹರಕೆ ಹೊತ್ತು ಹೆಜ್ಜೆ ಹಾಕಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಧರ್ಮಪುರಿ ಮೇಟೂರು ಕೊಳತೂರು, ಹೊಸೂರು ಡೆಂಕಣೆಕೋಟೆ, ಅಂಚೆಟ್ಟಿ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದಾರೆ. ಇದಲ್ಲದೆ ಆನೇಕಲ್ ತಾಲೂಕಿನ ಅತ್ತಿಬೆಲೆ ಮಾಯಸಂದ್ರ ತಳಿ ಸರ್ಜಾಪುರ ಜಿಗಣಿ ಹುಣಸನಹಳ್ಳಿ, ಕೊಳಗೊಂಡನಹಳ್ಳಿ, ತಿಂಗಳುವಾಡಿ ಇಗ್ಗಲೂರು ಬನ್ನೇರುಘಟ್ಟ ಮರುಗೋಂದಹಳ್ಳಿ, ತಿರುಪಲ್ಯ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಗ್ರಾಮಗಳ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ಸಾಗುತ್ತಿದ್ದಾರೆ.

ಪಾದಯತೆಯಲ್ಲಿ ಬರುವಾಗ ಮಹದೇಶ್ವರ ಸ್ವಾಮಿಯ ಕಾವ್ಯಗಳನ್ನು ಆಡುತ್ತ ಸೋಬಾನೆ ಪದಗಳ ಮೂಲಕ ಮಲೆ ಮಹದೇಶ್ವರನನ್ನು ಸ್ಮರಿಸುತ್ತಾ ಸಾಗುವ ಭಕ್ತಾದಿಗಳ ದೃಶ್ಯ ಮನಮೋಹಕವಾಗಿದೆ. ತಮ್ಮ ಹರಕೆಗಳನ್ನು ತೀರಿಸಲು ನೂರಾರು ಕಿಲೋಮೀಟರ್ಗಳಷ್ಟು ದೂರ ಬರಿಗಾಲಿನಲ್ಲಿ ನಡೆಯುತ್ತಿರುವುದು ಅವರ ಅಚಲ ಭಕ್ತಿಗೆ ಸಾಕ್ಷಿಯಾಗಿದೆ.

ಯುಗಾದಿ ಜಾತ್ರಾ ಮಹೋತ್ಸವ 16 ರಿಂದ ಪ್ರಾರಂಭವಾಗಲಿದೆ ಮಾರ್ಚ್ 17 ರ ಸಂಜೆ 6:20 ರಿಂದ ರಾತ್ರಿ 8:30 ರವರೆಗೆ ಸ್ವಾಮಿಗೆ ಭಕ್ತಿಯ ‘ಎಣ್ಣೆಮಜ್ಜನ’ ಸೇವೆ ನಡೆಯಲಿದೆ. ಮಾರ್ಚ್ 18 & 19 ಫಾಲ್ಗುಣ ಮಾಸದ ಕೊನೆಯ ದಿನವಾದ ಅಮಾವಾಸ್ಯೆಯ ವಿಶೇಷ ಪೂಜೆಗಳು ಮತ್ತು ಉತ್ಸವಗಳು ಜರುಗಲಿವೆ. ಮಾರ್ಚ್ 19 (ಯುಗಾದಿ) ಬೆಳಿಗ್ಗೆ 3:00 ಗಂಟೆಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಬೆಳಿಗ್ಗೆ 9:45 ರಿಂದ 11:00 ಗಂಟೆಯ ಶುಭ ಮುಹೂರ್ತದಲ್ಲಿ ‘ಮಹಾರಥೋತ್ಸವ’ ವಿಜೃಂಭಣೆಯಿಂದ ನೆರವೇರಲಿದೆ. ನಂತರ ಗುರುಬ್ರಹ್ಮೋತ್ಸವ, ಅನ್ನಬ್ರಹ್ಮೋತ್ಸವ ಮತ್ತು ಭಕ್ತರಿಗೆ ಬೇವು-ಬೆಲ್ಲದ ಪ್ರಸಾದ ವಿನಿಯೋಗ ನಡೆಯಲಿದೆ.

ಈ ಬಾರಿಯ ವಿಶೇಷ ಅಮಾವಾಸ್ಯೆ ಮತ್ತು ಯುಗಾದಿ ಸಂಗಮ
ಈ ವರ್ಷದ ಯುಗಾದಿಯ ಮತ್ತೊಂದು ವಿಶೇಷವೆಂದರೆ ಫಾಲ್ಗುಣದ ಅಮಾವಾಸ್ಯೆ ಮತ್ತು ಚೈತ್ರದ ಪಾಡ್ಯಮಿ ಹತ್ತಿರವಾಗಿರುವುದು. ಅಮಾವಾಸ್ಯೆಯಂದು ಭಕ್ತರು ಪಿತೃ ತರ್ಪಣ ಸಲ್ಲಿಸುತ್ತಾರೆ ಮತ್ತು ಮರುದಿನ ಹೊಸ ವರ್ಷದ ಹಬ್ಬವನ್ನು ಆಚರಿಸುತ್ತಾರೆ. ಯುಗಾದಿಯ ದಿನ ರೈತರು ತಮ್ಮ ಜಮೀನುಗಳಲ್ಲಿ ಗೋಪೂಜೆ ಸಲ್ಲಿಸಿ, ‘ಹೊನ್ನೇರು’ ಕಟ್ಟುವ ಮೂಲಕ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುವುದು ಸಂಪ್ರದಾಯ.

ತಮಿಳುನಾಡಿನ ಭಕ್ತರ ಪಾದಯಾತ್ರೆ ಮಾರ್ಗಗಳು

ತಮಿಳುನಾಡಿನ ವಿವಿಧ ಗ್ರಾಮಗಳಿಂದ ಬರುತ್ತಿರುವ ಭಕ್ತಾದಿಗಳು ದಬ್ಬಗೂಳಿ ಬಸವೇಶ್ವರ ಸನ್ನಿಧಾನದಿಂದ ಕಾವೇರಿ ನದಿ ದಾಟಿ ದಂಟಳ್ಳಿ ಹಾಗೂ ಕೌದಳ್ಳಿ ಮೂಲಕ ಶ್ರೀ ಮಲೆ ಮಹದೇಶ್ವರ ಬೆಟ್ಟ ತಲುಪುತ್ತಿದ್ದಾರೆ. ಮತ್ತೊಂದು ಮಾರ್ಗದ ಮೂಲಕ ಹೊಗೇನಕಲ್ ಅಲಂಬಾಡಿ, ಪಾಲಾರ್ ಮಾರ್ಗವಾಗಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಸುಡು ಬಿಸಿಲಿನಲ್ಲಿಯೂ ಆಗಮಿಸುತ್ತಿರುವ ಭಕ್ತಾದಿಗಳು
ಕಳೆದ ಒಂದು ತಿಂಗಳಿನಿಂದ ಬಿಸಿಲಿನ ತಾಪಮಾನ ಹೆಚ್ಚಾಗಿ ನೆರಳಿನಿಂದ ಬಿಸಿಲಿಗೆ ಬರಲು ಸಾಧ್ಯವಾಗುತ್ತಿಲ್ಲ ಆದರೆ ಸಾವಿರಾರು ಭಕ್ತಾದಿಗಳು ಮಾದಪ್ಪನ ಬೆಟ್ಟಕ್ಕೆ ಬರಿ ಕಾಲಿನಲ್ಲಿ ನಡೆದುಕೊಂಡು ಹೋಗುವುದು ಸಾಮಾನ್ಯದ ಮಾತಲ್ಲ ಇವರಿಗೆ ಮಹದೇಶ್ವರ ಆಶೀರ್ವಾದದಿಂದ ನಡೆದುಕೊಂಡು ಹೋಗುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಪ್ರಾಧಿಕಾರದಿಂದ ಅಗತ್ಯ ಸಿದ್ಧತೆ
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಪ್ರಯುಕ್ತ ನಾಲ್ಕು ದಿನಗಳು ಜಾತ್ರೆ ನಡೆಯುತ್ತಿದ್ದು ಬರುವಂತಹ ಭಕ್ತಾದಿಗಳಿಗೆ ಕುಡಿಯುವ ನೀರು,ದಾಸೋಹ ಪ್ರಸಾದ, ನೆರಳಿನ ವ್ಯವಸ್ಥೆ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ.

ಆತಂಕದಲ್ಲಿ ಪಾದಯಾತ್ರೆ ಮಾಡುತ್ತಿರುವ ಭಕ್ತಾದಿಗಳು
ಕಳೆದ ತಿಂಗಳು ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪಾದಯಾತ್ರಿಕರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಆದರೆ ಯುಗಾದಿ ಜಾತ್ರಾ ಮಹೋತ್ಸವಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ. ಚಿರತೆಯೊಂದು ರಂಗಸ್ವಾಮಿ ಒಡ್ಡು ಹಾಗೂ ಶನಿ ಮಹಾತ್ಮ ದೇವಸ್ಥಾನದ ಸಮೀಪ ಆಗಾಗ ಕಾಣಿಸಿಕೊಳ್ಳುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಆದರೂ ಭಕ್ತಾದಿಗಳು ಆತಂಕದಲ್ಲಿಯೇ ಪಾದಯಾತ್ರೆಯ ಮೂಲಕ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದಾರೆ ಒಟ್ಟಾರೆ ಯಾವುದಾದರೂ ಭಕ್ತಾದಿಗಳಿಗೆ ಅನಾಹುತ ಸಂಭವಿಸಿದರೆ ಇದಕ್ಕೆ ಅರಣ್ಯ ಇಲಾಖೆಯವರೇ ನೆರೆ ಹೊಣೆ ಎಂದು ಭಕ್ತಾದಿಗಳು ಆಕ್ರೋಶ ಹೊರ ಹಾಕಿದ್ದಾರೆ.

 

Tags:
error: Content is protected !!