- ಕ್ಷೇತ್ರದಲ್ಲಿ ಒಟ್ಟು ೧೭,೭೮,೩೧೦ ಮತದಾರರು : ೨ ಸಾವಿರ ಮತಗಟ್ಟೆಗಳ ಸ್ಥಾಪನೆ.
ಚಾಮರಾಜನಗರ: ಚಾ.ನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏ.೨೬ ರಂದು ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆ ತನಕ ಮತದಾನ ನಡೆಯಲಿದ್ದು, ಚುನಾವಣೆ ಆಯೋಗ ಮತ್ತು ವಿವಿಧ ಇಲಾಖೆಗಳ ಸಮನ್ವತೆಯೊಂದಿಗೆ ಜಿಲ್ಲಾಡಳಿತವು ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧೭,೭೮,೩೧೦ ಮತದಾರರಿದ್ದಾರೆ. ಇವರಲ್ಲಿ ೮,೭೮,೭೦೨ ಪುರುಷ, ೮,೯೯,೫೦೧ ಮಹಿಳಾ ಮತದಾರರು. ೧೦೭ ಇತರೆ ಹಾಗೂ ೩೫೭ ಸೇವಾ ಮತದಾರರಿದ್ದಾರೆ. ಇವರಲ್ಲಿ ೩೪೪ ಪುರುಷ ಮತ್ತು ೧೩ ಮಹಿಳಾ ಮತದಾರರು. ಕ್ಷೇತ್ರದಲ್ಲಿ ಒಟ್ಟು ೧೪ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ. ಇವರಲ್ಲಿ ೧೩ ಪುರುಷರು ಮತ್ತು ಒಬ್ಬ ಮಹಿಳಾ ಅಭ್ಯರ್ಥಿಯಾಗಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಷೇತ್ರಾದ್ಯಂತ ಒಟ್ಟು ೨ ಸಾವಿರ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ನಗರ ಪ್ರದೇಶದಲ್ಲಿ ೨೬೩ ಮತ್ತು ಗ್ರಾಮೀಣ ಪ್ರದೇಶದಲ್ಲಿ ೧,೭೩೭ ಮತಗಟ್ಟೆಗಳು ಇರಲಿವೆ. ಮಹಿಳೆಯರು ಮತದಾನದಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಜಿಲ್ಲೆಯ ೪ ಕ್ಷೇತ್ರಗಳಲ್ಲಿ ಒಟ್ಟು ೧೬ ಸಖಿ ಮತಗಟ್ಟೆ ಸ್ಥಾಪಿಸಲಾಗುತ್ತದೆ ಎಂದರು.
ಇದಲ್ಲದೆ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ೨ ಸಾಂಪ್ರದಾಯಿಕ ಬುಡಕಟ್ಟು ಮತಗಟ್ಟೆ, ವಿಶೇಷ ಚೇತನರಿಗೆ ೪ ಕ್ಷೇತ್ರಗಳಲ್ಲಿ ತಲಾ ಒಂದೊಂದು ಮತಗಟ್ಟೆ ಪ್ರಾರಂಭಿಸಲಾಗುತ್ತದೆ. ಜೊತೆಗೆ ನಾಲ್ವರು ಭಾಷಾ ಅನುವಾದಕರನ್ನು ನೇಮಿಸಲಾಗಿದೆ ಎಂದರು.
ಜಿಲ್ಲೆಯ ೪ ಕ್ಷೇತ್ರಗಳಲ್ಲಿ ಯುವ ಮತದಾರರು ಹೆಚ್ಚಾಗಿರುವ ಪ್ರದೇಶಗಳನ್ನು ಗುರುತಿಸಿ ತಲಾ ೨ ಯುವ ಸೌರಭ ಮತಗಟ್ಟೆಗಳನ್ನು ತೆರೆಯಲಾಗಿದೆ. ಸಾಂಸ್ಕೃತಿಕ ಕಲೆಗಳ ಮಹತ್ವ ತಿಳಿಸಲು ೨ ಪಾರಂಪರಿಕ ಮತಗಟ್ಟೆ ಸ್ಥಾಪಿಸಲಾಗುತ್ತದೆ ಎಂದರು.
ಇದಲ್ಲದೆ ರೈತರ ಮಹತ್ವ ಸಾರುವ ೮ ಅನ್ನದಾತ ಮತಗಟ್ಟೆ, ಅರಣ್ಯದ ಮಹತ್ವ ಹೇಳುವ ೬ ಹಸಿರು ಮತಗಟ್ಟೆಗಳನ್ನು ಆರಂಭಿಸಲಾಗುತ್ತದೆ. ಕ್ಷೇತ್ರಾದ್ಯಂತ ೨ ಸಾವಿರ ಬ್ಯಾಲೆಟ್ ಯೂನಿಟ್, ೨ ಸಾವಿರ ಕಂಟ್ರೋಲ್ ಯೂನಿಟ್, ೨ ಸಾವಿರ ವಿ.ವಿ.ಪ್ಯಾಟ್‌ಗಳನ್ನು ಬಳಸಲಾಗುವುದು ಎಂದು ವಿವರಿಸಿದರು.
ಮತದಾರರ ಸಹಾಯವಾಣಿ ೧೯೫೦ಕ್ಕೆ ಏ.೨೧ರವರೆಗೆ ಮತದಾರರ ಪಟ್ಟಿ, ಭಾವಚಿತ್ರವಿರುವ ಗುರುತಿನ ಚೀಟಿ ಸಂಬಂಧ ೩೮೩ ಕರೆಗಳು ಬಂದಿದ್ದವು. ಇವುಗಳಲ್ಲಿ ೧೦ ದೂರುಗಳು ಮಾತ್ರ ಬಾಕಿಯಿದ್ದು ಉಳಿದವನ್ನು ಇತ್ಯರ್ಥ ಮಾಡಲಾಗಿದೆ. ಸಿವಿಜಿಲ್ ಮೊಬೈಲ್ ಆಪ್‌ಗೆ ಏ.೨೧ ರವರೆಗೆ ೧೦೨೭ ದೂರುಗಳು ಬಂದಿದ್ದವು. ೬೯೫ ಅನ್ನು ಪರಿಹರಿಸಲಾಗಿದೆ ಎಂದರು.
ಬಂದೋಬಸ್ತ್‌ಗೆ ೧೬೬೭ ಪೊಲೀಸರು: ಜಿಲ್ಲೆಯಲ್ಲಿರುವ ೯೮೩ ಮತಗಟ್ಟೆಗಳ ಪೈಕಿ ೧೯೭ ಅನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಮತದಾನವನ್ನು ನ್ಯಾಯಯುತ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲಾದ್ಯಂತ ಒಟ್ಟು ೧,೬೬೭ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದರು.
ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹು, ಎಡಿಸಿ ಗೀತಾ ಹುಡೇದ ಹಾಜರಿದ್ದರು.
ಏ.೨೫ರಂದು ಕ್ಷೇತ್ರದ ಪಟ್ಟಣಗಳಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕಾರ್ಯ ನಡೆಯಲಿದೆ. ಜೂನ್ ೪ ರಂದು ಬೆಳಿಗ್ಗೆ ೮ ರಿಂದ ಚಾ.ನಗರದ ಹೊರವಲುಂದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
– ಸಿ.ಟಿ.ಶಿಲ್ಪಾ ನಾಗ್