ಯಳಂದೂರು: ತಾಲ್ಲೂಕಿನ ಮದ್ದೂರು ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಗಂಡು ಚಿರತೆಯೊಂದು ಸೆರೆಯಾಗಿದೆ.
ಕಳೆದ ಕೆಲ ತಿಂಗಳಿಂದಲೂ ತಾಲ್ಲೂಕಿನ ಯರಿಯೂರು, ಮದ್ದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಆ ಭಾಗದ ನಾಯಿಗಳನ್ನು ತಿಂದು ಜನರಲ್ಲಿ ಆತಂಕ ಮೂಡಿಸಿತ್ತು. ಪರಿಣಾಮ ಸಾರ್ವಜನಿಕರು, ರೈತರು ಜಮೀನುಗಳಿಗೆ ತೆರಳಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
ಗ್ರಾಮಸ್ಥರ ಒತ್ತಾಯದ ಮೇರೆಗೆ ಮದ್ದೂರು ಬಳಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಸೋಮವಾರ ( ಅಕ್ಟೋಬರ್ 21 ) ರಾತ್ರಿ ಚಿರತೆ ಬೋನಿಗೆ ಸೆರೆ ಸಿಕ್ಕಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಬಿಳಿಗಿರಿರಂಗನ ಬೆಟ್ಟದ ಕಾಡಿಗೆ ಬಿಟ್ಟಿದ್ದಾರೆ. ಚಿರತೆ ಬೋನಿಗೆ ಬಿದ್ದ ಮದ್ದೂರು ಹಾಗೂ ಸುತ್ತಲಿನ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ.