ಚಾಮರಾಜನಗರ : ತಾಲ್ಲೂಕಿನ ಕುದೇರು – ತೊರವಳ್ಳಿ ರಸ್ತೆಯ ಬದಿಯಲ್ಲಿರುವ ಕರಿಕಲ್ಲು ಕ್ವಾರಿ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
ಕರಿಕಲ್ಲು ಕ್ವಾರಿಯಲ್ಲಿ ವಾಸ್ತವ್ಯ ಹೂಡಿದ್ದ ಚಿರತೆಯು ಕಳೆದ ಒಂದು ತಿಂಗಳ ಅವಧಿಯಲ್ಲಿ ಹೆಗ್ಗವಾಡಿ, ಕುದೇರು, ದೇಮಹಳ್ಳಿ, ತೊರವಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ನಾಯಿಗಳು, ಕರುಗಳನ್ನು ತಿಂದು ಹಾಕಿತ್ತು.
ಈ ಚಿರತೆಯು ಅಡ್ಡಾಡುತ್ತಿದ್ದರಿಂದ 4 ಗ್ರಾಮಗಳ ಜನರು ತಮ್ಮ ತೋಟದ ಜಮೀನುಗಳಿಗೆ ಹೋಗಿ ಬರಲು ಭಯಪಡುತ್ತಿದ್ದರು. ಈ ಬಗ್ಗೆ ಜನರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಬೋನು ಇಟ್ಟು ಸೆರೆಗೆ ಯತ್ನಿಸಿದ್ದರು.
ಶುಕ್ರವಾರ ರಾತ್ರಿ ಬೋನಿನಲ್ಲಿ ಕಟ್ಟಿಹಾಕಿದ್ದ ಮೇಕೆಯನ್ನು ತಿನ್ನಲು ಬಂದು ಸೆರೆಯಾಗಿದೆ. ಅರಣ್ಯಾಧಿಕಾರಿಗಳು ಚಿರತೆಯನ್ನು ವಶಕ್ಕೆ ಪಡೆದಿದ್ದಾರೆ. ಚಿರತೆಯ ಆರೋಗ್ಯ ತಪಾಸಣೆ ನಡೆಸಿ ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ.





