Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕೆಎಸ್‌ಆರ್‌ಟಿಸಿ ಬಸ್‌ ಪಲ್ಟಿ; ಡ್ರೈವರ್‌ ಬದಲು ಕಂಡಕ್ಟರ್‌ ಬಸ್‌ ಚಲಾಯಿಸಿದ್ದೇ ಕಾರಣ ಎಂದ ಪ್ರಯಾಣಿಕರು!

ಹನೂರು: ಕೆಎಸ್ಆರ್ ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿರುವ ಘಟನೆ ತಾಲೂಕಿನ ಪಿಜಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕರಂಗಶೆಟ್ಟಿ ಗ್ರಾಮದ ಸಮೀಪ ಜರುಗಿದೆ.

ಕೊಳ್ಳೇಗಾಲ ಪಟ್ಟಣದಿಂದ ಮಂಗಲ, ಚನ್ನಾಲಿಂಗನಹಳ್ಳಿ, ಲೊಕನಹಳ್ಳಿ ,ಒಡೆಯರಪಾಳ್ಯ ಮಾರ್ಗವಾಗಿ ಬೈಲೂರು ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿ ಸುಮಾರು ಐದಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಈ ಬಸ್ ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಲೊಕನಹಳ್ಳಿ ,ಒಡೆಯರಪಾಳ್ಯ ಬೈಲೂರು ಗ್ರಾಮದ ವಿವಿಧ ಶಾಲೆಗಳಿಗೆ ಶಿಕ್ಷಕರು, ಶಿಕ್ಷಕಿಯರು ವಿದ್ಯಾರ್ಥಿಗಳು ಪ್ರತಿದಿನ ಈ ಬಸ್ ನಲ್ಲಿ ತೆರಳುತ್ತಿದ್ದರು. ಇಂದು ಚಾಲಕನ ಬದಲು ನಿರ್ವಾಹಕ ಬಸ್ ಚಾಲನೆ ಮಾಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆರೋಪಿಸಿದ್ದಾರೆ.

 

ಬಸ್ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಲಗಡೆಗೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಕೇವಲ ಐದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಉಳಿದವರಿಗೆ ಮೂಳೆ ಹಾಗೂ ಹೊಟ್ಟೆ ಸೇರಿದಂತೆ ದೇಹದ ವಿವಿಧ ಒಳ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಬಸ್ ಪಲ್ಟಿಯಾಗಿರುವ ಘಟನೆ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ಜಮಾವಣಿಗೊಂಡು ಬಸ್ ನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದಾರೆ. ಪರಿವರ್ತನಾ ಗ್ರಾಮ ಸಮಿತಿ ಅಧ್ಯಕ್ಷ ಎನ್ ಕೃಷ್ಣಮೂರ್ತಿ ಮಾತನಾಡಿ ಒಡೆಯರಪಾಳ್ಯ ಭಾಗದಲ್ಲಿ ಸಂಚರಿಸುತ್ತಿರುವ ಕೆಎಸ್ಆರ್ಟಿಸಿ ಬಸ್ ಗಳು ತುಂಬಾ ಹಳೆಯದಾಗಿದ್ದು ಗುಣಮಟ್ಟದಿಂದ ಕೂಡಿಲ್ಲ, ಕಳೆದ ಒಂದು ವರ್ಷದ ಹಿಂದೆ ಪಿಜಿ ಪಾಳ್ಯ ಸಮೀಪದ ಹಳ್ಳಕ್ಕೆ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ 6 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಇಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ ಇನ್ನು ಮುಂದಾದರು ಈ ಭಾಗಕ್ಕೆ ಉತ್ತಮ ಗುಣಮಟ್ಟದ ಹೊಸ ಬಸ್ ಗಳನ್ನು ಬಿಡಬೇಕು, ನಿರ್ವಾಹಕನ ಕೆಲಸ ಮಾಡುವ ಬದಲು ಚಾಲಕನ ಕೆಲಸ ಮಾಡಿ ಬಸ್ ಪಲ್ಟಿ ಮಾಡಿರುವ ನಿರ್ವಾಹಕನ ವಿರುದ್ಧ ಹಾಗೂ ತನ್ನ ಜವಾಬ್ದಾರಿಯನ್ನು ಮರೆತು ನಿರ್ವಾಹಕನಿಗೆ ಬಸ್ ನೀಡಿರುವ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಒಡೆಯರಪಾಳ್ಯ ಮಾರ್ಗದಲ್ಲಿ ಸಂಚರಿಸುತ್ತಿರುವ ಕೆಎಸ್ಆರ್ ಟಿಸಿ ಬಸ್ ಗಳು ಎಲ್ಲೆಂದರಲ್ಲಿ ದುರಸ್ತಿಯಾಗಿ ನಿಲ್ಲುತ್ತಿದೆ.

ಈ ಸಂಬಂಧ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿಲ್ಲ ಅದೃಷ್ಟವಶಾತ್ ದೇವರ ದಯೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ, ಇನ್ನು ಮುಂದಾದರು ನೂತನ ಬಸ್ ಗಳನ್ನು ಈ ಮಾರ್ಗಕ್ಕೆ ಬಿಡಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!