ಕೊಳ್ಳೇಗಾಲ: ವಿಷಪೂರಿತ ಮರಳ ಕಾಯಿ ತಿಂದು ಕಾರ್ಮಿಕರ ಕುಟುಂಬದ 7 ಮಕ್ಕಳು ಸೇರಿದಂತೆ 12 ಮಂದಿ ಅಸ್ವಸ್ಥರಾಗಿರುವ ಘಟನೆ ಕೊಳ್ಳೇಗಾಲ ತಾಲ್ಲೂಕು ಸತ್ತೇಗಾಲ ಗ್ರಾಮದಲ್ಲಿ ಬುಧವಾರ ನಡೆದಿದೆ.
ಅಸ್ವಸ್ಥಗೊಂಡವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ತೀವ್ರ ಅಸ್ವಸ್ತಗೊಂಡಿದ್ದ ಯುವರಾಜು ಎಂಬ 4 ವರ್ಷದ ಬಾಲಕನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಸ್ವಸ್ಥಗೊಂಡವರು ಕೊಪ್ಪಳ ಜಿಲ್ಲೆಯ ಕುಣಿಕೆರಿ ತಾಂಡ ಗ್ರಾಮದ ಯುವರಾಜು(4), ವೆಂಕಟೇಶ್ (8) ಪ್ರೀತಮ್ (10), ಪವನ್ (10), ಅನುಷಾ (11),ಅಂಕಿತಾ (11), ಅರ್ಜುನ(11), ಬದ್ರಿಬಾಯಿ (35), ಸೀತಾಬಾಯಿ (45), ಲಕ್ಷ್ಮೀ (35), ಸರಸ್ವತಿ (40), ಲಲಿತಾ (45) ಎಂದು ಗೊತ್ತಾಗಿದೆ.
ಕುಣಿಕೆರೆ ತಾಂಡಾದ ಪುರುಷರು, ಮಹಿಳೆಯರು ತಮ್ಮ ಮಕ್ಕಳೊಡನೆ ಕುಂತೂರು ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಆಧಾರದ ಮೇಲೆ ಕಬ್ಬು ಕಟಾವು ಮಾಡಲು ಬಂದು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ವಾಸವಿದ್ದರು. ಬುಧವಾರ ಬೆಳಿಗ್ಗೆ ಹ್ಯಾಂಡ್‌ಪೋಸ್ಟ್ ಬಳಿಯ ಕಬ್ಬಿನ ಗದ್ದೆಗೆ ಕಬ್ಬು ಕಟಾವು ಮಾಡಲು ತಮ್ಮ ಮಕ್ಕಳ ಜೊತೆ ತೆರಳಿದ್ದರು.
ಮಧ್ಯಾಹ್ನ ಮಕ್ಕಳು ಕಬ್ಬಿನ ಗದ್ದೆಯ ಬೇಲಿಯಲ್ಲಿ ಬೆಳೆದಿದ್ದ ಮರಳ ಕಾಯಿ ಬಿಡಿಸಿಕೊಂಡು ತಿಂದಿದ್ದಾರೆ. ಸಿಹಿಯಾಗಿದೆ ಎಂದು ತಮ್ಮ ತಂದೆ, ತಾಯಿಯರಿಗೂ ತಿನ್ನಿಸಿದ್ದಾರೆ. ಸಂಜೆ 5 ಗಂಟೆ ವೇಳೆಗೆ ಮರಳ ಕಾಯಿ ತಿಂದಿದ್ದ ಮಕ್ಕಳು ಹಾಗೂ ವಯಸ್ಕರು ಸೇರಿದಂತೆ 14 ಮಂದಿ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಜಮೀನಿನ ಮಾಲೀಕರು ಹಾಗೂ ಇತರರು ಅಸ್ವಸ್ಥರನ್ನು ಆಟೋಗಳ ಮೂಲಕ ಪಟ್ಟಣದ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿಹಿ ಇರುವ ವಿಷಪೂರಿತ ಮರಳ ಕಾಯಿಯನ್ನು ತಿನ್ನಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.