ಚಾಮರಾಜನಗರ: ನಿನ್ನ ತಲೆಯಲ್ಲಿ ಕೂದಲಿಲ್ಲ. ನೀನು ನೋಡಲು ಚೆನ್ನಾಗಿಲ್ಲ ಎಂದು ಪತ್ನಿ ಪದೇ ಪದೇ ನೀಡುತ್ತಿದ್ದ ಟಾರ್ಚರ್‌ನಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಉಡಿಗಾಲ ಗ್ರಾಮದಲ್ಲಿ ನಡೆದಿದೆ.
ಪರಶಿವ ಎಂಬುವವರೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದು, ಎಲ್ಲರ ಎದುರು ಪತ್ನಿ ಪದೇ ಪದೇ ಅವಮಾನ ಮಾಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ಅಲ್ಲದೇ ಹೈಫೈ ಜೀವನ ಮಾಡಲು ಬಯಸಿದ್ದ ಪತ್ನಿ, ರೀಲ್ಸ್‌ಗಳ ಗೀಳಿನಲ್ಲೇ ಮುಳುಗಿಹೋಗಿದ್ದಳು ಎನ್ನಲಾಗಿದೆ.
ಪದೇ ಪದೇ ಬಟ್ಟೆ ಕೊಡಿಸು, ಆಭರಣ ಕೊಡಿಸು ಎಂದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಳು. ಇದಲ್ಲದೇ ಪತಿಯ ಮೇಲೆಯೇ ಸುಳ್ಳು ಕೇಸ್ ಹಾಕಿ ಒಂದೂವರೆ ತಿಂಗಳು ಜೈಲಿಗೂ ಕೂಡ ಕಳಿಸಿದ್ದಳು.
ಈ ಹಿನ್ನೆಲೆಯಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಪರಶಿವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.