ಗುಂಡ್ಲುಪೇಟೆ: ರಾಜ್ಯದಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದಲೂ ತಾಪಮಾನ ತೀವ್ರ ಏರಿಕೆಯಾಗಿದ್ದು, ಜನತೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ಕಾಡು ಪ್ರಾಣಿಗಳು ಕೂಡ ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ದಿನೇ ದಿನೇ ಕೆರೆ ಹಾಗೂ ನದಿಗಳಲ್ಲಿ ಸ್ನಾನ ಮಾಡುವ ವಿಚಾರ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ.
ಈ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಭೋಗಯ್ಯನಹುಂಡಿ ಗ್ರಾಮದಲ್ಲಿ ಬಿಸಿಲಿನ ತಾಪದಿಂದ ಬಸವಳಿದಿದ್ದ ಕೋತಿಯೊಂದು ತನ್ನ ಮರಿಯ ಜೊತೆ ನಲ್ಲಿಯಿಂದ ನೀರು ಕುಡಿಯಲು ಪ್ರಯತ್ನಿಸಿದೆ.
ಕೋತಿ ನಲ್ಲಿಯಿಂದ ನೀರು ಕುಡಿಯುವ ದೃಶ್ಯವನ್ನು ಗ್ರಾಮಸ್ಥರೊಬ್ಬರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.