ಚಾಮರಾಜನಗರ : ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಬೆನ್ನಲ್ಲೇ, ವರುಣ ದಿಢೀರ್ ಪ್ರತ್ಯಕ್ಷನಾಗಿ ಧರೆಗೆ ತಂಪೆರೆದಿದ್ದಾನೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಅದೇ ರೀತಿ ಚಾಮರಾಜನಗರದಲ್ಲಿಯೂ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ತಾಲ್ಲೂಕಿನ ವೀರನಪುರ, ಯಡಪುರ, ತಮ್ಮಡಹಳ್ಳಿ, ಮರಿಯಾಲ, ಕಡುವಿನ ಕಟ್ಟೆ ಹುಂಡಿ ಗ್ರಾಮಗಳ ಸುತ್ತಮುತ್ತ ಆಲಿಕಲ್ಲು ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಗೆ ಜನ ಕಂಗಾಲಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಸುಮಾರು 3.30 ಗಂಟೆ ವೇಳೆ ಅರ್ಧ ಗಂಟೆ ಕಾಲ ಆಲಿಕಲ್ಲು ಸಹಿತ ಬಿರುಸಿನ ಮಳೆ ಸುರಿಯಿತು. ದೊಡ್ಡ ಗಾತ್ರದ ಆಲಿಕಲ್ಲು ಮಂಜುಗಡ್ಡೆ ರೀತಿ ಬಿದ್ದಿದ್ದು ಅಚ್ಚರಿ ಮೂಡಿಸಿದೆ. ಈ ಬಾರಿಯ ಮೊದಲ ವರ್ಷಧಾರೆ ಆಲಿಕಲ್ಲು ಸಹಿತ ಮಳೆ ಸುರಿದಿರುವುದು ಆಶ್ಚರ್ಯ ಮೂಡಿಸಿದೆ.





