ಹನೂರು: ಬಹಿರ್ದೆಸೆಗೆ ತೆರಳಿದ್ದ ಯುವಕನೋರ್ವನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಜರುಗಿದೆ.
ಬೆಂಗಳೂರು ಮೂಲದ ಹರಿಪ್ರಸಾದ್ ಎಂಬುವವನೇ ಮೃತಪಟ್ಟ ಯುವಕನಾಗಿದ್ದಾನೆ.
ಚಂಗಡಿ ಗ್ರಾಮದ ಮಧು ರವರು ಕೆಲಸ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದಾರೆ. ಇವರು ಸ್ನೇಹಿತರ ಜೊತೆ ಚಂಗಡಿ ಗ್ರಾಮಕ್ಕೆ ತೆರಳಿ ಆನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಲು ತೀರ್ಮಾನಿಸಿ ಗ್ರಾಮಕ್ಕೆ ಆಗಮಿಸಿದ್ದರು. ಶನಿವಾರ ಸಂಜೆ ಐವರು ಸ್ನೇಹಿತರು ಚಂಗಡಿ ಗ್ರಾಮದ ಕರಿ ಕಲ್ಲು ಕೋರೆಯ ಸಮೀಪ ಬಹಿರ್ದೆಸೆಗೆ ತೆರಳಿದ್ದರು.
ಈ ವೇಳೆ ಹರಿಪ್ರಸಾದ್ ಎಂಬ ಯುವಕ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದ ಪರಿಣಾಮ ಹೊಟ್ಟೆ ಕಾಲು, ಹಾಗೂ ಇನ್ನಿತರ ಕಡೆ ತೀವ್ರ ಗಾಯಗಳಾಗಿದ್ದವು. ತಕ್ಷಣ ಸ್ನೇಹಿತರು ಕಾರಿನಲ್ಲಿ ಸಮೀಪದ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇರುವುದರಿಂದ ಮೈಸೂರಿಗೆ ಕರೆದುಕೊಂಡು ಹೋಗುವಂತೆ ಹೋಲಿ ಕ್ರಾಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನಂತರ ಸ್ನೇಹಿತರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.





