ಹನೂರು : ಕಾವೇರಿ ವನ್ಯಜೀವಿಧಾಮದ ಹೊಲೆಮುರಿದಟ್ಟಿ ಕರಿಕಲ್ಲು ಗುಡ್ಡ ಅರಣ್ಯ ಪ್ರದೇಶದಲ್ಲಿ ಶೂಟ್‌ಔಟ್ ನಡೆದ ಸ್ಥಳಕ್ಕೆ ಪ್ರಕರಣದ ಪ್ರಮುಖ ಸಾಕ್ಷಿ ಮಹಿಮಾ ದಾಸ್‌ನನ್ನು ಕರೆದೊಯ್ದು ಘಟನೆ ಬಗ್ಗೆ ಸಿಐಡಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಸಿಐಡಿ ಡಿವೈಎಸ್ಪಿ ಆರ್.ಎಸ್. ಜಹಗೀರ್‌ದಾರ್ ನೇತೃತ್ವದ ತಂಡವು ಪ್ರಮುಖ ಸಾಕ್ಷಿ ಮಹಿಮಾ ದಾಸ್‌ನನ್ನು ಹೆಚ್ಚಿನ ವಿಚಾರಣೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಈ ವೇಳೆ ಘಟನಾ ಸ್ಥಳಕ್ಕೆ ಕರೆದೊಯ್ದು, ನೀವು ಮನೆಯಿಂದ ಎಷ್ಟು ಗಂಟೆಗೆ ಅರಣ್ಯಕ್ಕೆ ತೆರಳಿದ್ದೀರಿ, ಅರಣ್ಯ ಇಲಾಖೆ ಅಧಿಕಾರಿಗಳು ಯಾವಾಗ ನಿಮ್ಮ ಮೇಲೆ ಗುಂಡಿನ ದಾಳಿ ನಡೆಸಿದರು, ಆ ಸಮಯದಲ್ಲಿ ನೀವು ಏನು ಮಾಡುತ್ತಿದ್ದೀರಿ, ಶೂಟ್‌ಔಟ್‌ನಿಂದ ನೀವು ಮಾತ್ರ ಹೇಗೆ ತಪ್ಪಿಸಿಕೊಂಡಿದ್ದೀರಿ, ತಪ್ಪಿಸಿಕೊಂಡು ನೇರವಾಗಿ ಮನೆಗೆ ಹೋಗಿದ್ದೀರಾ ಅಥವಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೀರಾ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ವೇಳೆ ಮಹಿಮಾ ದಾಸ್ ಸಿಐಡಿ ಅಧಿಕಾರಿಗಳ ಮುಂದೆ, ನಾವು ನಾಲ್ವರು ಹಸು ಹುಡುಕಲು ಅರಣ್ಯಕ್ಕೆ ತೆರಳಿದ್ದೆವು, ಎಲ್ಲೂ ಸಿಗಲಿಲ್ಲ. ಆಯಾಸಗೊಂಡಿದ್ದರಿಂದ ಕಲ್ಲಿನ ಮೇಲೆ ಮಲಗಿದ್ದೆವು. ನನಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಬೇರೆ ಕಡೆಗೆ ಹೋಗಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದರು, ನಾನು ಅದನ್ನು ನೋಡಿ ತಪ್ಪಿಸಿಕೊಂಡಿದ್ದೇನೆ ಎಂದು ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.
ಅರಣ್ಯಕ್ಕೆ ಹೋಗಿದ್ದಾಗ ಎಷ್ಟು ಗನ್‌ಗಳನ್ನು ತೆಗೆದುಕೊಂಡು ಹೋಗಿದ್ದೀರಿ ಹಾಗೂ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಾವು ಯಾವುದೇ ಗನ್ ತೆಗೆದುಕೊಂಡು ಹೋಗಿಲ್ಲ, ಆಹಾರ ಸಾಮಗ್ರಿಗಳನ್ನೂ ತೆಗೆದುಕೊಂಡು ಹೋಗಿಲ್ಲ, ಅದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ದ್ವಂದ್ವ ಹೇಳಿಕೆ ನೀಡುತ್ತಿರುವ ಮಹಿಮಾ ದಾಸ್
ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣದ ಪ್ರಮುಖ ಸಾಕ್ಷಿ ಮಹಿಮಾ ದಾಸ್‌ನನ್ನು ವಿಚಾರಣೆ ನಡೆಸಿದಾಗ, ನಾವು ಬೇಟೆಗೆ ಹೋಗಿದ್ದು ನಿಜ, ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಬ್ಯಾಟರಿ ಬೆಳಕು ಹಾಗೂ ಚಲನವಲನಗಳನ್ನು ನೋಡಿ ಶೂಟ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆದರೆ ಸಿಐಡಿ ಪೊಲೀಸ್ ಅಧಿಕಾರಿಗಳ ಮುಂದೆ ನಾವು ಹಸು ಹುಡುಕಲು ಹೋಗಿದ್ದೆವು ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಡಿವೈಎಸ್ಪಿ ಮೇರಿ ಶೈಲಜಾ ನೇತೃತ್ವದ ತಂಡ ಶನಿವಾರ ಕಿಡಿಗೇಡಿಗಳು ಧ್ವಂಸ ಮಾಡಿದ್ದ ಹೊಳೆಮುರಿದಟ್ಟಿ ಕಳ್ಳಿ ದೊಡ್ಡಿ, ಬೇಟೆಗಾರನ ಗುಡ್ಡ ಕಳ್ಳ ಬೇಟೆ ತಡ ಶಿಬಿರಗಳನ್ನು ಪರಿಶೀಲನೆ ಮಾಡಿದ್ದಾರೆ. ಭಾನುವಾರ ಪೊಲೀಸ್ ಇಲಾಖೆಯಿಂದ ಇದುವರೆಗೂ ಸಂಗ್ರಹಿಸಿರುವ ಮಾಹಿತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಿಐಡಿ ಇನ್ಸ್‌ಪೆಕ್ಟರ್ ರಾಘವೇಂದ್ರ ಅವರು ರಾಮಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಅರಣ್ಯ ಇಲಾಖೆಗೆ ಸೇರಿದ ಜೀಪ್, ದಾಳಿ ಮಾಡಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಅರಣ್ಯ ಇಲಾಖೆಯ ಜೀಪ್ ಚಾಲಕ ಅರುಣ್ ಕುಮಾರ್ ರವರನ್ನು ಠಾಣೆಗೆ ಕರೆಯಿಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಬಳಿಕ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಹಜಾರ್ ನಡೆಸಿದ್ದಾರೆ. ಇದೇ ವೇಳೆ ರಾಮಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್, ಸಿಐಡಿ ಮುಖ್ಯ ಪೇದೆ ಶ್ರೀನಿವಾಸ್ ಹಾಜರಿದ್ದರು.
ಸಿಐಡಿ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ಕೊತ್ತನೂರು ವಲಯದ ಕಳ್ಳ ಬೇಟೆ ಶಿಬಿರ ಹಾಗೂ ಅರಣ್ಯ ಇಲಾಖೆಗೆ ಸೇರಿದ ಆಸ್ತಿಪಾಸ್ತಿಗಳನ್ನು ನಾಶ ಮಾಡಿರುವ ಬಗ್ಗೆ ದೂರು ನೀಡಿದ್ದ ವಲಯ ಅರಣ್ಯ ಅಧಿಕಾರಿ ಸುಂದರ್ ಅವರಿಂದ ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ.




