ಹನೂರು: ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಹೊಲ ಗ್ರಾಮದ ಬಾವಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಹೊಲ ಗ್ರಾಮದ ಸುಶೀಲ (೩೦) ಮಕ್ಕಳಾದ ಚಂದ್ರು (೮) ದಿವ್ಯ (೧೧) ಮೃತಪಟ್ಟವರು.
ಘಟನೆ ವಿವರ: ಕಾಡುಹೊಲ ಗ್ರಾಮದ ಸುಶೀಲರವರ ಮನೆಗೆ ಸುಶೀಲ ರವರ ತಮ್ಮ ಮಾದೇವ ಆಗಮಿಸಿ ಭಾವ ಮಹೇಶ್ ನ ಮೊಬೈಲ್ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಈ ಸಂಬಂಧ ಮಹೇಶ್ ಬಾಮೈದನಿಗೆ ಮೊಬೈಲ್ ಮತ್ತು ಹಣ ತೆಗೆದುಕೊಂಡು ಹೋಗಿರುವ ಬಗ್ಗೆ ದೂರವಾಣಿ ಕರೆ ಮಾಡಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಸಂಬಂಧ ಗಂಡ ಮಹೇಶ್ ಹೆಂಡತಿ ಸುಶೀಲ ರವರ ಜೊತೆ ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣ ಮತ್ತು ಮೊಬೈಲ್ ಅನು ನಿನ್ನ ತಮ್ಮ ತೆಗೆದುಕೊಂಡು ಹೋಗಿದ್ದಾನೆ ಎಂದು ಜಗಳವಾಡಿದ್ದಾನೆ. ಇದರಿಂದ ಬೇಸತ್ತ ಸುಶೀಲ ತನ್ನ ಇಬ್ಬರು ಮಕ್ಕಳ ಜೊತೆ ಭಾನುವಾರ ರಾತ್ರಿ ಮನೆಯಿಂದ ತೆರಳಿ ಕಾಡುಹೂಲ ಸಮೀಪದಲ್ಲಿನ ಜಮೀನೊಂದರ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರದಂದು ಜಮೀನಿನ ಮಾಲೀಕ ಬಾವಿಯಲ್ಲಿ ನೀರು ತರಲು ತೆರಳಿದಾಗ ಬಾವಿಯ ಬಳಿ ಚಪ್ಪಲಿ ತಾಳಿ ಹಾಗೂ ಇನ್ನಿತರ ವಸ್ತುಗಳು ಕಂಡು ಬಂದಿದೆ. ತಕ್ಷಣ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ಸಹಕಾರದಿಂದ ಬಾವಿಯಲ್ಲಿ ಮುಳುಗಿದ್ದ ಮೂವರನ್ನು ಮೇಲೆತ್ತಿದ್ದಾರೆ.
ಈ ಸಂಬಂಧ ಸುಶೀಲರವರ ತಂದೆ ವೀರಣ್ಣ ಅಳಿಯ ಮಹೇಶ್ ಮೇಲೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಲೆಮಾದೇಶ್ವರ ಬೆಟ್ಟ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೂವರ ಶವವನ್ನು ಮಲೆಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಜಗದೀಶ್ ಆಂದೋಲನಕ್ಕೆ ತಿಳಿಸಿದರು.