ಹನೂರು: ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರನೇ ವಾರ್ಡಿನ ಬಡಾವಣೆಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೂದು ನಿರ್ವಹಣಾ ಕಾಮಗಾರಿಗೆ ಚಾಲನೆ ನೀಡಿ ನಂತರ ಕೆಲವು ಬಡಾವಣೆಗಳಿಗೆ ಭೇಟಿ ನೀಡಿ ಜನರ ಕುಂದು ಕೊರತೆ ಆಲಿಸಿದರು.
ಈ ವೇಳೆ ವಾರ್ಡಿನ ನಿವಾಸಿಗಳು ಮಾತನಾಡಿ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರನೇ ಮತ್ತು ನಾಲ್ಕನೇ ವಾರ್ಡಿನಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೆ ಇರುವುದರಿಂದ ಕಸ ಕೊಳೆಯುತ್ತಿದೆ. ಇದರಿಂದ ವಾರ್ಡಿನ ನಿವಾಸಿಗಳು ಮೂಗು ಮುಚ್ಚಿಕೊಂಡು ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ .ಈ ಸಂಬಂಧ ಪಟ್ಟಂತೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಗ್ರಾಮದ ಬಡಾವಣೆಗಳಲ್ಲಿರುವ ಚರಂಡಿಗಳಲ್ಲಿ ಕಸ ಕಡ್ಡಿಗಳು ತುಂಬಿ ಸಾಂಕ್ರಮಿಕ ರೋಗಕ್ಕೆ ಅಹ್ವಾನ ನೀಡುತ್ತಿದೆ. ಚರಂಡಿಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ಬರುವ ಸಾಧ್ಯತೆ ಇರುವುದರಿಂದ ಸೂಕ್ತ ಕ್ರಮವಹಿಸುವಂತೆ ನಿವಾಸಿಗಳು ಮನವಿ ಮಾಡಿದರು.
ಶಾಸಕ ಎಂಆರ್ ಮಂಜುನಾಥ ಸ್ಥಳದಲ್ಲಿಯೇ ಇದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು, ತಿಂಗಳಿಗೊಮ್ಮೆ ಚರಂಡಿ ಸ್ವಚ್ಛಗೊಳಿಸಬೇಕು ಪ್ರತಿದಿನ ಮನೆಗಳ ಕಸ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಇಒ ಉಮೇಶ್, ಪಿಡಿಒ ಆಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.





