ಸಾಲಕ್ಕೆ ಹೆದರಿ ಅಪ್ಪ ಅಮ್ಮ ನನ್ನನ್ನ ಬಿಟ್ಟು ಹೋಗಿದ್ದಾರೆ: ಗ್ರಾಮದ ಯುವಕನ ಅಳಲು
ಚಾಮರಾಜನಗರ: ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು, ಬಡವರ ಜೀವ ಹಿಂಡುತ್ತಿವೆ. ಫೈನಾನ್ಸ್ ಕಂಪನಿಗಳ ಹಾವಳಿಗಳಿಗೆ ಎಷ್ಟೋ ಜನ ತಮ್ಮ ಊರುಗಳನ್ನು ತೊರೆಯುತ್ತಿದ್ದಾರೆ. ಇದೀಗ ಇಂತದ್ದೆ ಘಟನೆ ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ ನಡೆದಿದೆ. ಫೈನಾನ್ಸ್ ಹಾವಳಿಗೆ ಬೇಸತ್ತು ಬರೋಬ್ಬರಿ 100 ಕುಟುಂಬಗಳು ಊರು ತೊರೆದಿವೆ.
ಯಾವಾಗಲೂ ಜನರಿಂದ ತುಂಬಿದ್ದ ಊರು, ಇದೀಗ ಬರಿದಾಗಿ ಕಾಣುತ್ತಿದೆ. ಮನೆಗೆಲ್ಲಾ ಬೀಗ ಹಾಕಿ ಕುಟುಂಬಗಳು ಊರು ತೊರೆದಿವೆ. ಹಲವೆಡೆ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಕರೆದೊಯ್ದಿದ್ದಾರೆ. ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕುಗೊಂಡಿದೆ. ಎಲ್ಲಿ ಹೋಗಿದ್ದಾರೆ ಎಂಬುದೆ ತೋಚುತ್ತಿಲ್ಲ ಎನ್ನುತ್ತಾರೆ ಅಳಿದುಳಿದ ಜನರು.
ಮೈಕ್ರೋ ಫೈನಾನ್ಸ್ ಕಂಪನಿಗಳು ಆರಂಭದಲ್ಲಿ ಸಾಲ ನೀಡಲು ಪುಸಲಾಯಿಸುತ್ತಾರೆ. ಸಾಲ ನೀಡಿದ ನಂತರ ಹಣ ಕಟ್ಟಲು ಒಂದು ದಿನ ತಡವಾದರು ತುಂಬಾ ತೊಂದರೆ ನೀಡುತ್ತಾರೆ. ಮನೆಗೆ ಬಂದು ಕೆಟ್ಟ ಮಾತುಗಳನ್ನು ಆಡುತ್ತಾರೆ. ಇವರ ಕಾಟ ತಾಳಲಾರದೆ ನಮ್ಮ ತಂದೆ-ತಾಯಿ ಊರು ತೊರೆದಿದ್ದಾರೆ ಎಂದು ಗ್ರಾಮದ ಯುವಕ ಅಳಲು ತೋಡಿಕೊಂಡಿದ್ದಾನೆ.
ತಮ್ಮ ತಂದೆ-ತಾಯಿ ಊರು ತೊರೆದಿರುವುದಕ್ಕೆ ಕಣ್ಣೀರು ಹಾಕುತ್ತಾ, ಫೈನಾನ್ಸ್ ಕಂಪನಿಗಳಿಂದ ನಮಗೆ ಮುಕ್ತಿ ಕೊಡಿಸಿ. ಸರ್ಕಾರ ನನಗೆ ಏನಾದರೂ ಅನುಮತಿ ನೀಡಿದರೆ ನನ್ನ ಕಿಡ್ನಿ ಮಾರಿ ಆದರೂ ನಾನು ಸಾಲ ತೀರಿಸುತ್ತೇನೆ. ನಮ್ಮ ತಂದೆ ತಾಯಿ ಇಲ್ಲದೇ ನಾನು ನಮ್ಮ ಚಿಕ್ಕಪ್ಪನ ಮನೆಯಲ್ಲಿ ಇರುವಂತಹ ಪರಿಸ್ಥಿತಿ ಬಂದಿದೆ ಎಂದು ಯುವಕ ಅಳಲು ತೋಡಿಕೊಂಡನು.
ಗ್ರಾಮದ ಶ್ರೀಕಂಠ ಎಂಬಾತ ಎರಡು ಕಂಪನಿಗಳಿಂದ ಒಟ್ಟು 3 ಲಕ್ಷ ಸಾಲ ಪಡೆದಿದ್ದಾನೆ. ನಂತರ ಸಾಲ ಕಟ್ಟಲು ಸ್ವಲ್ಪ ಸಮಯ ತಡವಾದ ಕಾರಣ 3 ಲಕ್ಷಕ್ಕೆ ಬಡ್ಡಿ ಸೇರಿಸಿ ಒಟ್ಟು 6 ಲಕ್ಷ ಕಟ್ಟಬೇಕೆಂದು ಕಂಪನಿಯವರು ಆತನಿಗೆ ತೊಂದರೆ ನೀಡಿದ್ದಾರೆ. ಇದರಿಂದ ಆ ಕುಟುಂಬ ಊರು ತೊರೆದಿದೆ. ಇದೇ ರೀತಿ ಊರಿನ 100ಕ್ಕೂ ಹೆಚ್ಚು ಕುಟಂಬಗಳು ಸಾಲ ಬಾಧೆ ತಾಳಲಾಗದೆ ಊರು ತೊರೆದಿದೆ.