ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಬಿಳಿಗಿರಿರಂಗನ ಬೆಟ್ಟದಲ್ಲಿ ಬೆಳ್ಳಂಬೆಳಿಗ್ಗೆಯೇ ಆನೆಯೊಂದು ಬೆಟ್ಟದ ಸುತ್ತಮುತ್ತೆಲ್ಲಾ ಓಡಾಗಿ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಭಾರೀ ಕೀಟಲೆ ನೀಡಿದೆ.
ಬಿಳಿಗಿರಿರಂಗನ ಬೆಟ್ಟದ ಪ್ರಮುಖ ರಸ್ತೆಗಳಲ್ಲಿ, ಬಂಗಲೆ ಪೋಡಿನ ರಸ್ತೆಯಲ್ಲಿ ಮನಬಂದಂತೆ ಓಡಾಡಿರುವ ಕಾಡಾನೆ ಎಲ್ಲರಲ್ಲಿಯೂ ಆತಂಕ ಉಂಟುಮಾಡಿದೆ.
ಬೆಟ್ಟದ ರಸ್ತೆಯಲ್ಲಿ ನಿಂತು ಅತ್ತಿಂದಿತ್ತ ಸೊಂಡಿಲು ಬೀಸುತ್ತಾ ಗಜ ಗಾಂಭೀರ್ಯದಿಂದ ಹೆಜ್ಜೆಹಾಕಿರುವ ಒಂಟಿ ಸಲಗ ರಸ್ತೆಯಲ್ಲಿ ತಿರುಗಾಡುತ್ತಿದ್ದ ಕೆಎಸ್‌ಆರ್‌ಟಿಸಿ ವಾಹನ, ಟಾಟಾ ಏಸ್ ಸೇರಿದಂತೆ ತನಗೆ ಅಡ್ಡಲಾಗಿ ಬಂದ ಎಲ್ಲಾ ವಾಹನಗಳನ್ನು ಹಿಮ್ಮೆಟ್ಟಿಸಿ ಆಕ್ರೋಶ ಹೊರ ಹಾಕಿದೆ.
ಆಹಾರಕ್ಕಾಗಿ ಕಳೆದೆರೆಡು ತಿಂಗಳಿನಿಂದ ಕಾಡಾನೆ ಪೋಡಿನ ಕಡೆಗೆ ಬರುತ್ತಿದೆ. ಹಣ್ಣು-ಹಂಪಲ ಸೇವಿಸಿ ಹೊರ ಹೋಗುವ ವೇಳೆ ಅಡ್ಡ ಸಿಕ್ಕ ವಾಹನಗಳ ಮೇಲೆ ದಾಳಿ ಮಾಡುವುದು ಹೀಗೆ ಆನೆ ಕಾಟ ನೀಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.