ಚಾಮರಾಜನಗರ : ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡವು ಕೀಳಲೀಪುರ, ಕುಲಗಾಣ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದರು.
ಕೀಳಲೀಪುರದ ಗುರುಸಿದ್ದಪ್ಪ ಎಂಬುವರ ಬಾಳೆತೋಟ, ಶ್ರೀಕಂಠಪ್ಪ ಅವರ ನೆಲಗಡಲೆ ಮತ್ತು ಟೊಮ್ಯಾಟೊ, ಕುಲಗಾಣ ಗ್ರಾಮದ ತಿರುಪತಿ ನಾಯಕರ ಸೇವಂತಿ ಫಸಲು, ಶೀಗೆವಾಡಿ ಗ್ರಾಮದ ಮರಿದಾಸನಾಯಕ ಅವರ ಹತ್ತಿ ಫಸಲನ್ನು ವೀಕ್ಷಿಸಿದರು.
ಮೂಡ್ನಾಕೂಡು ಗ್ರಾಮದ ನಾಗೇಶ್ ಅವರ ಬಾಳೆ ತೋಟ ಪರಿಶೀಲನೆ ನಡೆಸಿದರು. ಗಾಳಿ ಮಳೆಗೆ ಬಾಳೆ ಫಸಲು ನೆಲಕ್ಕೆ ಒರಗಿರುವುದನ್ನು ಗಮನಿಸಿದರು.
ಮುಂಗಾರು ಮಳೆ ಬೀಳದೆ ಜೋಳ, ಹತ್ತಿ, ನೆಲಗಡಲೆ ಫಸಲು ಒಣಗಿ ನಷ್ಟವಾಗಿದೆ ಎಂದು ರೈತರು ದೂರಿದರು.
ಸರಿಯಾಗಿ ವಿದ್ಯುತ್ ನೀಡದೆ ಬಾಳೆ, ತರಕಾರಿ ಫಸಲು ಹಾನಿಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಭೇಟಿ ನೀಡಿ ಪರಿಶೀಲಿಸಿಲ್ಲ. ಕಳೆದ 3 ದಿನಗಳಿಂದ ಮಳೆಯಾಗುತ್ತಿದ್ದರೂ ಏನು ಪ್ರಯೋಜನವಿಲ್ಲ ಎಂದು ರೈತರು ತಂಡದ ಗಮನಕ್ಕೆ ತಂದರು.
ತಂಡದಲ್ಲಿ ಶಾಸಕ ಶ್ರೀವತ್ಸ, ಡಾ.ನವೀನ್ ಕುಮಾರ್, ಮಾಜಿ ಶಾಸಕರಾದ ಎನ್.ಮಹೇಶ್, ಎಸ್. ಬಾಲರಾಜ್, ಸಿ.ಎಸ್.ನಿರಂಜನಕುಮಾರ್, ಹರ್ಷವರ್ಧನ್, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಬಿಜೆಪಿ ಜಿಲ್ಲಾಧ್ತಕ್ಷ ನಾರಾಯಣಪ್ರಸಾದ್, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್, ಎಸ್ ಟಿ ಮೋರ್ಚಾ ಅಧ್ಯಕ್ಷ ಜಯಸುಂದರ್ ಇತರರಿದ್ದರು.