ಚಾಮರಾಜನಗರ : ಹಣ ದ್ವಿಗುಣ ಮಾಡುವುದಾಗಿ ನಂಬಿಸಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ.ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಅವಿನಾಷಿ ಸಚ್ಚಿದಾನಂದ ಎಂಬುವವರು ಈ ಸಂಬಂಧ ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅನ್ಸಾರಿ, ಸೈಯದ್ ಇಮ್ರಾನ್ ಸೇರಿದಂತೆ 7 ಜನರ ವಿರುದ್ಧ ದೂರು ನೀಡಿದ್ದಾರೆ.
ಸಚ್ಚಿದಾನಂದ ಗಾರ್ಮೆಂಟ್ಸ್ ವ್ಯಾಪಾರಿಯಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಈತನಿಗೆ ಅನ್ಸಾರಿ ಎಂಬ ವ್ಯಕ್ತಿ ಪರಿಚಯವಾಗಿದ್ದ. ಈತ ನಿಮ್ಮ ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಂದು ಸಚ್ಚಿದಾನಂದ ಅವರನ್ನು ನಂಬಿಸಿ ನಗರಕ್ಕೆ ಬರಲು ಹೇಳಿದ್ದಾನೆ. ಅನ್ಸಾರಿಯ ಮಾತನ್ನು ನಂಬಿದ ಸಚ್ಚಿದಾನಂದ 3 ಲಕ್ಷ ರೂ. ಹಣ ತೆಗೆದುಕೊಂಡು ನಗರದ ಖಾಸಗಿ ಹೊಟೇಲ್‌ಗೆ ಆಗಮಿಸಿ ರೂಂ ಮಾಡಿಕೊಂಡು ಉಳಿದುಕೊಂಡಿದ್ದಾನೆ ಎಂದು ಹೇಳಲಾಗಿದೆ.
ಈ ರೂಂ ಗೆ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಡನೆ ಇತರೆ ನಾಲ್ಕು ಮಂದಿ ಬಂದು ಸಚ್ಚಿದಾನಂದರನ್ನು ಹೆದರಿಸಿದ್ದಾರೆ. ನೀನು ಕಾನೂನು ಬಾಹಿರ ಚಟುವಟಿಕೆಯಲ್ಲಿ ಬಾಗಿಯಾಗಿದ್ದೀಯ ನಿನ್ನನ್ನು ಬಂಧಿಸುತ್ತೇವೆ ಎಂದು ಹೇಳಿ ಆತನ ಬಳಿ ಇದ್ದ 3 ಲಕ್ಷ ರೂ.ಗಳನ್ನು ಕಿತ್ತುಕೊಂಡಿದ್ದಾರೆ. ನಿನ್ನ ಮೇಲೆ ಕೇಸ್ ಮಾಡಬಾರದು ಎಂದರೆ ಇನ್ನೂ ಒಂದು ಲಕ್ಷ ರೂ.ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ಸಚ್ಚಿದಾನಂದ ಸೈಯದ್ ಇಮ್ರಾನ್ ಎಂಬುವವರ ಖಾತೆಗೆ 70 ಸಾವಿರ ರೂ.ಗಳನ್ನು ಕಳುಹಿಸಿದಾಗ ನನ್ನನ್ನು ಬಿಟ್ಟು ಕಳುಹಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.





