ಚಾಮರಾಜನಗರ: ಕಿವಿ ಚುಚ್ಚಿಸಲು ಆಸ್ಪತ್ರೆಗೆ ಕರೆತಂದ ಆರು ತಿಂಗಳ ಮಗುವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಹಂಗಳಾ ಗ್ರಾಮದ ಆನಂದ್ ಹಾಗೂ ಮಾನಸ ದಂಪತಿಯ ಪ್ರತೀಕ್ಷ ಎಂಬ ಆರು ತಿಂಗಳ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಕಿವಿ ಚುಚ್ಚಲು ಕಿವಿ ಬಳಿ ಅನಸ್ತೇಷಿಯಾ ಇಂಜೆಕ್ಷನ್ ನೀಡಿದ್ದರು. ಈ ವೇಳೆ ಓವರ್ ಡೋಸ್‌ನಿಂದ ಸಾವಾಗಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.