Mysore
21
overcast clouds
Light
Dark

ಸೆ.21ರಿಂದ ಹತ್ತು ದಿನಗಳ ಕಾಲ ಕುಡಿತ ಬಿಡಿಸುವ ಶಿಬಿರ: ಡಾ.ಸೋಮಶೇಖರ್‌ ಮಾಹಿತಿ

ಹನೂರು: ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಸುತ್ತೂರು ಶ್ರೀ ವೀರ ಸಿಂಹಾಸನ ಮಠ, ಮೈಸೂರು ಜೆಎಸ್‌ಎಸ್ ಮಹಾ ವಿದ್ಯಾಪೀಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೆ.21 ರಿಂದ 10 ದಿನಗಳ ಕಾಲ ಆಯೋಜಿಸಿರುವ ಕುಡಿತ ಬಿಡಿಸುವ ಶಿಬಿರಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಶಿಬಿರದ ಸಂಚಾಲಕ ಡಾ. ಸೋಮಶೇಖರ್ ತಿಳಿಸಿದರು.

ಪಟ್ಟಣದ ವಾಸವಿ ಮಹಲ್ ಕಲ್ಯಾಣ ಮಂಟಪದಲ್ಲಿ ಕುಡಿತ ಬಿಡಿಸುವ ಶಿಬಿರ ಆಯೋಜನೆ ಸಂಬಂಧ ಮಂಗಳವಾರ ಆಯೋಜಿಸಿದ್ದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮದ್ಯವ್ಯಸನಿಗಳಲ್ಲಿ ಕುಡಿತ ಬಿಡಿಸಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಸಲುವಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ತಾಲೂಕು ಕೇಂದ್ರಗಳಲ್ಲಿ 10 ದಿನಗಳ ಕಾಲ ಕುಡಿತ ಬಿಡಿಸುವ ಶಿಬಿರವನ್ನು 2024ರಿಂದಲೂ ಆಯೋಜಿಸಲಾಗುತ್ತಿದೆ. ಈವರೆಗೂ ನಡೆದ 18 ಶಿಬಿರಗಳಲ್ಲಿ 1152 ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಆದರೆ ಹೊಸದಾಗಿ ರಚನೆಯಾದ ಹನೂರು ತಾಲೂಕಿನಲ್ಲಿ ಇದೀಗ ಶಿಬಿರವನ್ನು ಆಯೋಜಿಸಲಾಗಿದೆ. ಆದ್ದರಿಂದ ಮದ್ಯ ವ್ಯಸನಿಗಳು ಇದರ ಪ್ರಯೋಜನ ಪಡೆದುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುವುದರ ಮೂಲಕ ಶಿಬಿರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಇದೇ ವೇಳೆ ಶಿಬಿರ ಯಶಸ್ವಿ ಸಂಬಂಧ ನೆರೆದಿದ್ದವರಿಂದ ಅಗತ್ಯ ಸಲಹೆ, ಸೂಚನೆಯನ್ನು ಪಡೆಯಲಾಯಿತು.

ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪಪಂ ಸದಸ್ಯರಾದ ಹರೀಶ್, ಸುದೇಶ್, ಸೋಮಶೇಖರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಗೌಡ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾ ನಿರ್ದೇಶಕ ಕಣ್ಣೂರು ಬಸವರಾಜಪ್ಪ, ತಾಲೂಕು ನಿರ್ದೇಶಕ ವಿನೋದ್, ಹಾಪ್ ಕಾಮ್ಸ್ ನಿರ್ದೇಶಕ ಶಿವಪುರ ಲೋಕೇಶ್, ಮುಖಂಡರಾದ ವೆಂಕಟೇಶ್, ನಂಜುಂಡಸ್ವಾಮಿ, ಶಾಂತಮೂರ್ತಿ, ಮಾದೇಶ್, ರಾಜಶೇಖರ್, ಮಾದಪ್ಪ ಹಾಗೂ ಇನ್ನಿತರರು ಹಾಜರಿದ್ದರು.