ಚಾಮರಾಜನಗರ: ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮಾರಮ್ಮನ ಜಾತ್ರೆಯ ಕೊಂಡೋತ್ಸವ ಜಿಲ್ಲೆಯ ತಾಳವಾಡಿ ಗ್ರಾಮದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಳವಾಡಿಯಲ್ಲಿ ಮಾರಮ್ಮನ ಜಾತ್ರೆ ಪ್ರಯುಕ್ತ ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ನಡೆಯಿತು. ಈ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ತಾಳವಾಡಿ ಸಾಕ್ಷಿಯಾಯಿತು.
ಸುಮಾರು 150 ವರ್ಷಗಳಿಂದ ಈ ಗ್ರಾಮದಲ್ಲಿ ಕೊಂಡೋತ್ಸವ ನಡೆಯುತ್ತಾ ಬಂದಿದ್ದು, ತಾಳವಾಡಿ ಫಿರ್ಕಾದ 58 ಗ್ರಾಮಗಳು ಸೇರಿದಂತೆ ಚಾಮರಾಜನಗರ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.